ಮಡಿಕೇರಿ ನ.24 NEWS DESK : ನಗರದ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ವತಿಯಿಂದ ನ.26 ರಂದು ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಮಹೋತ್ಸವ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಕುರಿತು ಮಾಹಿತಿ ನೀಡಿದ ಅವರು, ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿಯಂದು ಮುಂಜಾನೆಯಿಂದ ದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಪ್ಪಂ ಸೇವೆ, ಪಂಚಕಜ್ಜಾಯ ಸೇವೆ, ಹಣ್ಣುಕಾಯಿ ಪೂಜೆ, ಪುಷ್ಪಾರ್ಚನೆ, ಮಂಗಳಾರತಿ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಪೂಜೆ ಸಲ್ಲಿಸುವ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದಲೆ ಎಳನೀರು ಮತ್ತು ಹಾಲನ್ನು ಒದಗಿಸಲಾಗುತ್ತದೆಂದು ಮಾಹಿತಿಯನ್ನಿತ್ತರು. ಉತ್ಸವದ ಅಂಗವಾಗಿ ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಸುಬಹ್ಮಣ್ಯ ದೇವರ ಶ್ರೀ ಭೂತ ಬಲಿ(ಕ್ಷೇತ್ರ ಪ್ರದಕ್ಷಿಣೆ), 12.30 ಗಂಟೆಗೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆಯೆಂದು ವಿವರಗಳನ್ನಿತ್ತರು. :: ದೈವಗಳ ವೆಳ್ಳಾಟಂ :: ಉತ್ಸವದ ದಿನದಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, 9.30 ಗಂಟೆಗೆ ಶ್ರೀ ಕುಟ್ಟಿಚಾತನ್ ದೇವರ ವಳ್ಳಾಟಂ, 10 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, 10.30 ಗಂಟೆಗೆ ಶ್ರೀ ಗುಳಿಗ ದೇವರ ವೆಳ್ಳಾಟಂ, 11 ಗಂಟೆಗೆ ಶ್ರೀ ಪೋದಿ ದೇವರ ವೆಳ್ಳಾಟಂ ನೆರವೇರಲಿದೆಯೆಂದರು. ಅಂದು ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯಿಂದ ಭಜನಾ ಕಾರ್ಯಕ್ರಮ, 7 ಗಂಟೆಗೆ ರಂಗಪೂಜೆ, 8 ಗಂಟೆಗೆ ಮಹಾಪೂಜೆಯ ನಂತರ ಪ್ರಸಾದ ವಿತರಣೆಯಾಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟಿ.ಕೆ.ಸುಧೀರ್ ಮನವಿ ಮಾಡಿದರು. ಉತ್ಸವಕ್ಕೆ ಆರ್ಥಿಕ ನೆರವು, ಅನ್ನದಾನಕ್ಕೆ ಅಗತ್ಯವಾದ ಅಕ್ಕಿ. ಬೇಳೆ, ಬೆಲ್ಲ, ತರಕಾರಿ ಇತ್ಯಾದಿಗಳನ್ನು ದೇವಸ್ಥಾನದಲ್ಲಿ ಸ್ವೀಕರಿಸಲಾಗುತ್ತದೆ. ಪೂಜಾ ವ್ಯವಸ್ಥೆಗೆ ದಾನಿಗಳು 9448145554, 9448135592, 7975208721, 9448184779, 9449402045, 8861290731ನ್ನು ಸಂಪರ್ಕಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಉತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ರೈ, ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಅಧ್ಯಕ್ಷ ಮನು ಮಂಜುನಾಥ್, ದೇವಾಲಯ ಸಮಿತಿಯ ಗೌರವ ಸಲಹೆಗಾರ ಕೆ.ಆರ್.ವಾಸುದೇವ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಸುಬ್ರಮಣಿ ಹಾಗೂ ಕಾರ್ಯದರ್ಶಿ ಆರ್.ಗಿರೀಶ್ ಉಪಸ್ಥಿತರಿದ್ದರು.











