ಮಡಿಕೇರಿ ನ.24 NEWS DESK : ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸೂಡೆಂಟ್ಸ್ ಆರ್ಗನೈಜೇಷನ್ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಎಐಡಿಎಸ್‍ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಕರ್ನಾಟಕ ಪಬ್ಲಿಕ್ ಶಾಲೆಗಳ (ಏPS) – ಮ್ಯಾಗ್ನೆಟ್ ಶಾಲೆಗಳ ಯೋಜನೆ ಅಡಿಯಲ್ಲಿ ಸರ್ಕಾರವು ರಾಜ್ಯದಾದ್ಯಂತ 40,000ಕ್ಕೂ ಹೆಚ್ಚು ಶಾಲೆಗಳನ್ನು ವಿಲೀನಗೊಳಿಸಲು ಮತ್ತು ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಗುಣಮಟ್ಟ ಮತ್ತು ಮಾದರಿ ಶಾಲೆಗಳು ಎಂಬ ಆಕರ್ಷಕ ಪದಗಳ ಹಿಂದೆ, ಉಚಿತ ಮತ್ತು ಸಾರ್ವತ್ರಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು, ಕ್ರಾಂತಿಕಾರಿಗಳು ಕಷ್ಟಪಟ್ಟು ಗಳಿಸಿದ ವ್ಯವಸ್ಥೆಯನ್ನು ನಾಶಪಡಿಸುವ ಪ್ರಯತ್ನ ಅಡಗಿದೆ ಎಂದು ಆರೋಪಿಸಿದರು. ಕೇವಲ ಕೆಪಿಎಸ್ ಶಾಲೆಯಿಂದ ಸಮಸ್ಯೆಯಿಲ್ಲ. ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರೆಯುವ ಕೆಪಿಎಸ್- ಮ್ಯಾಗ್ನೆಟ್ ಶಾಲೆ ಅತ್ಯಂತ ಅಪಾಯಕಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು 49,600 ಸರ್ಕಾರಿ ಶಾಲೆಗಳಿದೆ. 30,000 ಗ್ರಾಮಗಳಿರುವ ನಮ್ಮ ರಾಜ್ಯದಲ್ಲಿ ಕೇವಲ 5,900 ಗ್ರಾಮ ಪಂಚಾಯಿತಿಗಳಿದೆ. ಸರ್ಕಾರದ ಯೋಜನೆಯ ಪ್ರಕಾರ ರಾಜ್ಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ 5,900 ಶಾಲೆಗಳು ಮಾತ್ರ ಉಳಿಯುತ್ತದೆ. ಈ ಮೂಲಕ ಬಡವರ ಮಕ್ಕಳು, ರೈತರ ಮಕ್ಕಳು ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದ್ದು, ಇದಕ್ಕೆ ಎಐಡಿಎಸ್‍ಓ ಸಂಘಟನೆ ವಿರೋಧ ಇದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಸಂಚಾಲಕರಾದ ಸ್ವಾತಿ ಮಾತನಾಡಿ, ಪಬ್ಲಿಕ್ ಶಾಲೆಯ ಸುತ್ತಮುತ್ತಲಿನ 1 ರಿಂದ 5 ಕಿ.ಮೀ ವ್ಯಾಪ್ತಿಯ, 50ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಚಿಕ್ಕಪುಟ್ಟ ಶಾಲೆಗಳನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿದೆ ಎಂದರು. ಸರ್ಕಾರವು ಪ್ರತಿ ಹಳ್ಳಿಗೆ ಬಸ್ ಬಿಡುತ್ತೇವೆ ಎಂದು ಹೇಳುತ್ತಿದೆ. ಆದರೆ ಈಗಾಗಲೇ ಎಷ್ಟೋ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಾಸ್ತವತೆ ಹೀಗಿರುವಾಗ, 6-7 ಕಿಮೀ ದೂರದ ಶಾಲೆಯನ್ನು ತಲುಪಲಾಗದೆ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬೇಕಾಗಿದೆ. ಈ ಯೋಜನೆಗೆ ಸಾಲ ಪಡೆಯಲಿರುವ ಸರ್ಕಾರವು ಕಾರ್ಫೋರೇಟ್ ಹಿತಾಸಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನರ ತೆರಿಗೆಯ ಮೇಲೆ ನಡೆಯುವ ಸರ್ಕಾರಗಳೇ ಶಿಕ್ಷಣದ ಮಾರಾಟಕ್ಕೆ ನಿಂತಿರುವಾಗ, ರಾಜ್ಯದಾದ್ಯಂತ ಪ್ರಬಲ ಪ್ರತಿರೋಧ ಚಳುವಳಿಯನ್ನು ಕಟ್ಟುವುದು ನಮ್ಮ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲೆಗಳನ್ನು ರಕ್ಷಿಸಲು ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕರು ಮತ್ತು ಪೆÇೀಷಕರು ಒಂದಾಗಬೇಕೆಂದು ಕರೆ ನೀಡಿದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್ ರಾಜಶೇಖರ್, ಎಐಡಿಎಸ್‍ಒ ಸಂಘಟನೆಯ ಪದಾಧಿಕಾರಿ ಅಂಜಲಿ, ವಿದ್ಯಾರ್ಥಿಗಳಾದ ಜೀವನ್, ಉಮಾವತಿ, ಪ್ರಿಯ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.











