ಮಡಿಕೇರಿ ನ.25 NEWS DESK : ಗಾಳಿಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಳಿಬೀಡು ಗ್ರಾಮದಲ್ಲಿ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನದಡಿಯಲ್ಲಿ ಡಿ.9 ರವರೆಗಿನ 14 ದಿನಗಳು ಆಶಾ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಮನೆ ಮನೆಗಳಿಗೆ ಭೇಟಿ ನೀಡಿ ರೋಗದ ಚಿಹ್ನೆಗಳನ್ನು ಪರೀಕ್ಷಿಸಿ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿ ಕಿರಣ್ ಅವರು ಚಾಲನೆ ನೀಡಿದರು. ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಮಾತನಾಡಿ, ಕಳೆದ 5 ವರ್ಷಗಳ ಹಿಂದಿನ ರೋಗ ಪ್ರಕರಣಗಳು ಕಂಡು ಬಂದಿರುವ ಮಡಿಕೇರಿ ತಾಲ್ಲೂಕಿನ ಆಯ್ದ ಗ್ರಾಮಗಳಾದ ಗಾಳಿಬೀಡು ಮತ್ತು ಪೆರಾಜೆ ಗ್ರಾಮಗಳಲ್ಲಿ 14 ದಿನಗಳ ಸರ್ವೇಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯವರು ಕ್ಷೇತ್ರ ಭೇಟಿ ನೀಡಿ ಶಂಕಿತ ಕುಷ್ಠರೋಗ ಪ್ರಕರಣಗಳನ್ನು ಗುರುತಿಸಲು ಮನೆ ಮನೆಗಳಿಗೆ ಆಶಾ ಕಾರ್ಯಕರ್ತರು ಬರುವ ಸಮಯದಲ್ಲಿ ಸಹಕಾರ ನೀಡುವಂತೆ ಕೋರಿದರು. ಚರ್ಮದ ಮೇಲಿನ ಯಾವುದೇ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆ ಮತ್ತು ದಪ್ಪನಾದ ಎಣ್ಣಿ ಪಸರಿಸಿದಂತಹ ಚಿಹ್ನೆಗಳಿರುವ ಕುಷ್ಠರೋಗ ದಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಿ ಕುಷ್ಠರೋಗ ಮುಕ್ತ ಭಾರತ ಮತ್ತು ಆರೋಗ್ಯಕರ ಸ್ವಸ್ಥ ಸಮಾಜಕ್ಕೆ ಸಹಕಾರ ನೀಡುವಂತೆ ಕರೆ ನೀಡಿದರು. ಹೆಚ್ಚಿನ ಮಾಹಿತಿಗೆ 104 ಸಂಖ್ಯೆಗೆ ಉಚಿತ ದೂರವಾಣಿ ಕರೆ ಮಾಡಲು ತಿಳಿಸಿದರು. ಈ ವೇಳೆ ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್. ಎ.ಎಂ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಧನು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಉಷಾ ಬಿ.ಜಿ, ಸಮುದಾಯ ಆರೋಗ್ಯ ಅಧಿಕಾರಿ ರಮ್ಯ, ಆಶಾ ಕಾರ್ಯಕರ್ತೆ ಸೌಭಾಗ್ಯ, ನಳಿನಿ ಅವರು ಹಾಜರಿದ್ದರು.











