ಮಡಿಕೇರಿ NEWS DESK ನ.25 : ಮೇಕೇರಿ ಗ್ರಾ.ಪಂ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ವಾರ್ಡ್ ಸಂಖ್ಯೆ 2 ರಲ್ಲಿರುವ ಮಳೆಹಾನಿ ಸಂತ್ರಸ್ತರ ಮನೆಗಳಿಗೆ ಕೊನೆಗೂ ಕುಡಿಯುವ ನೀರಿನ ಭಾಗ್ಯ ಸನ್ನಿಹಿತವಾಗಿದೆ. ಇತ್ತೀಚೆಗೆ ವಾರ್ಡ್ನ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಹಾಗೂ ಸ್ಥಳೀಯ ನಿವಾಸಿಗಳು ಮಳೆಹಾನಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಟ್ಟು 5 ವರ್ಷಗಳೇ ಕಳೆದಿದ್ದರೂ ಇಲ್ಲಿಯವರೆಗೆ ಶುದ್ಧ ಕುಡಿಯುವ ನೀರು ಒದಗಿಸದೆ ಇರುವ ಬಗ್ಗೆ ಮಾಧ್ಯಮಗಳ ಮೂಲಕ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿರುವ ಜಿ.ಪಂ ಅಧಿಕಾರಿಗಳು ಜಲ್ ಜೀವನ್ ಮಿಷನ್ ಯೋಜನೆ ಮೂಲಕ ನೀರು ಒದಗಿಸಲು ಸೂಚನೆ ನೀಡಿದ ಬೆನ್ನಲ್ಲೇ ಕಾಮಗಾರಿ ಆರಂಭಗೊಂಡಿದೆ. ವಾರ್ಡ್ ಸಂಖ್ಯೆ 2 ರಲ್ಲಿರುವ ಮಳೆಹಾನಿ ಸಂತ್ರಸ್ತರ 22 ಮನೆಗಳಿಗೆ ನೀರು ಸರಬರಾಜು ಮಾಡಲು ಪೈಪ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾ.ಪಂ ಸದಸ್ಯ ಎ.ಎ.ಅಬ್ದುಲ್ ಖಾದರ್ ಅವರು ನಮ್ಮ ಮನವಿ ತಕ್ಷಣ ಸ್ಪಂದನೆ ದೊರೆತ್ತಿದ್ದು, ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳಿಗೆ ನಿವಾಸಿಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಅಧಿಕಾರಿಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬಹುದು ಎಂದು ಇಲ್ಲಿಯವರೆಗೆ ಶಾಸಕರ ಗಮನ ಸೆಳೆದಿರಲಿಲ್ಲ. ಆದರೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಮಾಧ್ಯಮದ ಮೂಲಕ ಗಮನ ಸೆಳೆಯಲಾಗಿತ್ತು. ನಿವಾಸಿಗಳ ಅಳಲನ್ನು ಗಮನಿಸಿದ ಶಾಸಕರು ತುರ್ತು ಕ್ರಮ ಕೈಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಆದ್ದರಿಂದ ಶಾಸಕರ ಸ್ಪಂದನೆಗೆ ಶ್ಲಾಘನೆ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.










