ಕುಶಾಲನಗರ ನ.25 NEWS DESK : ಭಾರತೀಯ ಶ್ರೀಮಂತ ಸಂಸ್ಕೃತಿಯ ಪ್ರತೀಕ ರಂಗೋಲಿ. ಗೃಹಿಣಿಯ ದಿನ ಆರಂಭವಾಗುವುದೇ ಮನೆಯ ಮುಂದೆ ರಂಗೋಲಿ ಬಿಡಿಸುವುದರ ಮೂಲಕ. ಅಂತಹ ಕಲೆಯನ್ನು ಕಲಾವಿದರ ಮೂಲಕ ಅನಾವರಣ ಮಾಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಯಶಸ್ವಿಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಕುಶಾಲನಗರದ ರಥ ಬೀದಿಯಲ್ಲಿ ಆಯೋಜಿಸಿದ ರಂಗೋಲಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ರಂಗೋಲಿ ಕೇವಲ ಮಹಿಳೆಯರಿಗೆ ಸೀಮಿತಗೊಳಿಸಬಾರದು. ಮುಂದಿನ ವರ್ಷದ ರಂಗೋಲಿ ಸ್ಪರ್ಧೆಯಲ್ಲಿ ನಾವುಗಳು ಭಾಗವಹಿಸೋಣ ಎಂದು ಕರೆ ನೀಡಿದರು. ಕಲೆ ಎನ್ನುವದು ಅತ್ಯಂತ ಶ್ರೇಷ್ಠವಾದದ್ದು. ಅಂತಹ ಅದ್ಬುತ ಪ್ರತಿಭೆಗಳನ್ನು ಗುರುತಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಕಸಾಪ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ ಸಾಮಾನ್ಯರ ಮನಃ ಗೆದಿದೆ. ರಂಗೋಲಿ ಎನ್ನುವುದು ಮಹಿಳೆಯರ ಪ್ರತಿಭೆಯನ್ನು ಗುರುತಿಸುವ ಸಾಧನವಾಗಿದೆ. ರಥ ಬೀದಿಯ ಬಗ್ಗೆ ಹೇಳುವುದಾದರೆ, ಇದು ಹಲವು ಗುರುತರ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಇಲ್ಲಿಯ ವರ್ತಕರು ಕೂಡ ಅತ್ಯಂತ ಸೌಜನ್ಯಯುತವಾಗಿ ಇಂತಹ ಕಾರ್ಯಕ್ರಮಗಳಿಗೆ ಬೆಂಬಲಿಸುವುದು ಆದರ್ಶವಾಗಿದೆ. ಕಸಾಪ ಅಧ್ಯಕ್ಷ ಕೆ ಎಸ್ ನಾಗೇಶ್ ಮಾತನಾಡಿ, ಯಾವುದೇ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯವಾಗುವುದು ಕೇವಲ 3 ಜನರಿಗೆ. ಉಳಿದವರು ಬೇಸರ ಪಡದೆ ಈಗ ಆಗಿರುವ ತಪ್ಪುಗಳು ಮುಂದಿನ ಬಾರಿ ಆಗದಂತೆ ಎಚ್ಚರವಹಿಸಿ ಗೆಲುವಿನ ಕಡೆ ಚಿಂತನೆ ಹರಿಸಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ವರ್ತಕರಾದ ಎಸ್.ಕೆ.ಸತೀಶ್, ಕೆ.ಜೆ.ಚಿನ್ನಸ್ವಾಮಿ, ರಾಧಾ, ಸವಿತಾ ಗೋವಿಂದರಾಜ್, ಕಸಾಪ ಕಾರ್ಯದರ್ಶಿ ನಾಗರಾಜ್.ಎಸ್, ಖಜಾಂಚಿ ಕೆ.ವಿ.ಉಮೇಶ್, ನಿರ್ದೇಶಕರಾದ ದೇವಿ ಪ್ರಸಾದ್, ಎಂ.ಎನ್.ಕಾಳಪ್ಪ, ಫಿಲೋಮಿನಾ, ಕೂಡಿಗೆ ಶ್ರೀನಿವಾಸ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ ಎನ್ ಮೂರ್ತಿ ಮತ್ತಿತ್ತರ ಪ್ರಮುಖರು ಹಾಜರಿದ್ದರು. : : ಬಹುಮಾನದ ವಿವರ : : ಮೊದಲ ಬಹುಮಾನ ರೂ.6 ಸಾವಿರ ಪಡೆದವರು : ಜ್ಯೋತಿ, ದ್ವಿತೀಯ ಬಹುಮಾನ ರೂ.4 ಸಾವಿರ ಪಡೆದವರು : ರಶ್ಮಿ, ತೃತೀಯ ಬಹುಮಾನ ರೂ.2 ಸಾವಿರ ಪಡೆದವರು : ಉಷಾ ರಾಣಿ.











