ಮಡಿಕೇರಿ ನ.25 NEWS DESK : ಬೆಂಗಳೂರಿನ ಶಿರಂಗಳ್ಳಿ ಗ್ರಾಮಕಾರಡ ಒಕ್ಕೂಟದ ಸಂತೋಷ ಕೂಟ ಸಂಭ್ರಮದಿಂದ ನಡೆಯಿತು. ಬೆಂಗಳೂರಿನ ವಸಂತನಗರದ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ನಿಕಟ ಪೂರ್ವ ಎನ್.ಎಸ್.ಎಸ್ ನೊಡಲ್ ಅಧಿಕಾರಿ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಮಂದೆಯಂಡ ಡಾ.ವನಿತ್ ಕುಮಾರ್ ನಾಣಯ್ಯ ಕೊಡವ ಸಂಸ್ಕೃತಿ, ಪದ್ಧತಿ, ಆಚಾರ-ವಿಚಾರ ವಿಶಿಷ್ಟವಾಗಿದ್ದು ಅದರ ಉಳಿವು ಮತ್ತು ಬೆಳವಣಿಗೆಗೆ ಯುವ ಜನರು ಪ್ರಯತ್ನ ಪಡಬೇಕು ಎಂದು ಅಭಿಪ್ರಾಯಪಟ್ಟರು. ಯುವ ಸಮೂಹ ಉದ್ಯೋಗ ಆರಿಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ವಾರಾಂತ್ಯದ ಮೋಜು ಮಸ್ತಿಯ ನೆಪದಲ್ಲಿ ಮಾದಕವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದು, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಬದಲು ಕೊಡವ ಸಂಸ್ಕೃತಿಯ ಆಚರಣೆಗಳನ್ನು ಕಲಿಯುವಂತೆ ಆಗಬೇಕು. ಕೊಡಗಿನ ಮಣ್ಣಿನ ಗುಣ ವಿಶಿಷ್ಟವಾಗಿದ್ದು, ಅದನ್ನು ಉಳಿಸಲು ತಮ್ಮ ಭೂಮಿಯಲ್ಲಿ ತಾವು ದುಡಿಯುವುದಲ್ಲದೆ ಜಮ್ಮ ಭೂಮಿಯ ಸಂರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು. ರಾಜರ ಕಾಲದಲ್ಲಿ ಬಂದಿರುವ ಭೂಮಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಹಬ್ಬಹರಿ ದಿನಗಳಲ್ಲಿ ಯುವಜನತೆ ಕೊಡಗಿಗೆ ಬಂದು ಕೊಡಗಿನ ಆಚಾರ ವಿಚಾರಗಳನ್ನು ತಿಳಿಯುವಂತೆ ಆಗಬೇಕು ಆಗ ಮಾತ್ರ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪಸರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಂಸ್ಕೃತಿ ನಾಶವಾಗಿ ಒಂದು ಜನಾಂಗವೇ ನಶಿಸಿ ಹೋಗುತ್ತದೆ. ಯುವಜನತೆ ಮನಸ್ಸು ಮಾಡಿದರೆ ಮಾತ್ರ ಆಸ್ತಿ ಮಾರಟವನ್ನು ತಪ್ಪಿಸಿ ಕೊಡಗಿನ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸೇನೆಯ ನಿವೃತ್ತ ಹಾವಾಲ್ದಾರ್ ಮೋರ್ಕಂಡ ಕೆ.ನಾಣ್ಯಪ್ಪ ಮಾತನಾಡಿ, ಕೊಡಗು ಸೈನ್ಯಕ್ಕೆ ಹೆಸರುವಾಸಿ. ಮನೆಗೆ ಒಬ್ಬರಂತೆ ಹಿಂದೆ ಸೈನ್ಯಕ್ಕೆ ಸೇರುತ್ತಿದ್ದರು. ಆದರೆ ಇಂದು ಸೈನ್ಯಕ್ಕೆ ಸೇರುವ ಯುವಕರು ಕಡಿಮೆಯಾಗಿದ್ದಾರೆ. ದೇಶ ಸೇವೆ ಮಾಡಿದ ವ್ಯಕ್ತಿ ಎಲ್ಲಿ ಬೇಕಾದರೂ ಜಯಿಸಬಹುದು ಇಂದು ಹೆಣ್ಣು ಮಕ್ಕಳಿಗೂ ಸೈನ್ಯಕ್ಕೆ ಸೇರುವ ಅವಕಾಶ ಮಾಡಿಕೊಡಲಾಗಿದೆ ಆದ್ದರಿಂದ ಯುವಜನತೆ ಸೈನ್ಯಕ್ಕೆ ಸೇರಲು ಬೇಕಾದ ದೈಹಿಕ ಸದೃಢತೆ ಮತ್ತು ಶೈಕ್ಷಣಿಕ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಂಗಳ್ಳಿ ಗ್ರಾಮಕಾರಡ ಒಕ್ಕೂಟದ ಅಧ್ಯಕ್ಷ ಉಡುವೇರ ಸಿ.ಸುರೇಶ್, ಊರಿನ ಜನರನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಮುಂದೆ ನಾಡು ನುಡಿಗೆ ಸಂಬಂಧಿಸಿದ ಹಲವು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರಾದ ಮೊರ್ಕಂಡ ಗಣಪತಿ, ಸರ್ಕಂಡ ಸೋಮಯ್ಯ, ಮಂದೆಯಂಡ ರವಿ ಬಿದ್ದಪ್ಪ, ಮೊರ್ಕಂಡ ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಮಂದೆಯಂಡ ಪಿ.ರತನ್ ಸ್ವಾಗತಿಸಿದರು. ಖಜಾಂಚಿ ಉಡುವೇರ ಪಟ್ಟು ದಯಾನಂದ ವಂದಿಸಿದರು. ಸಮಾಜಕ್ಕೆ ಸೇವೆ ಮಾಡಿದ ಮಂದೆಯಂಡ ಡಾ.ವನಿತ್ ಕುಮಾರ್ ಮತ್ತು ಸೈನ್ಯಕ್ಕೆ ಸೇವೆ ಮಾಡಿದ ಮೋರ್ಕಂಡ ಕೆ.ನಾಣ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.











