ಕುಶಾಲನಗರ ನ.25 NEWS DESK : ಕನ್ನಡ ನಾಡಿನ ನೆಲ – ಜಲ, ಆಚಾರ – ವಿಚಾರಗಳು, ಇಲ್ಲಿನ ಸಂಸ್ಕಾರಗಳು ಹಾಗೂ ಮುಖ್ಯವಾಗಿ ಕನ್ನಡ ಭಾಷೆಯನ್ನು ಈ ನೆಲದ ಪ್ರತಿಯೊಬ್ಬರು ಪೂಜ್ಯ ಬಾವದಿಂದ ಕಾಣಬೇಕು ಎಂದು ಮಡಿಕೇರಿ ಸಾಹಿತಿ ಕೃಪಾ ದೇವರಾಜು ಕರೆ ನೀಡಿದರು. ಕುಶಾಲನಗರ ಸಮೀಪದ ಆವರ್ತಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡಿನ ನೆಲ ಹಾಗೂ ಜಲವೇ ಶ್ರೇಷ್ಠ ಸಂಪತ್ತು. ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆ ಅಪೂರ್ವವಾದುದು. ಅನ್ಯ ಭಾಷೆಗಳ ಹಾವಳಿಯ ನಡುವೆಯೂ ಗಡಿ ಜಿಲ್ಲೆಗಳಲ್ಲಿ ಕನ್ನಡ ಇಲ್ಲಿನ ಪ್ರತಿ ವಾಸಿಗಳ ಜೀವನದ ಹಾಸು ಹೊಕ್ಕಾಗಬೇಕಿದೆ. ಎಲ್ಲರೂ ಈ ನಾಡು ನುಡಿಯನ್ನು ಗೌರವಿಸಬೇಕಿದೆ ಎಂದು ಕೃಪಾ ದೇವರಾಜು ಕರೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಆವರ್ತಿ ಮಹಾದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೂರ್ಗಲ್ಲು ಶಿವಕುಮಾರ ಸ್ವಾಮಿ, ಬೆಟ್ಟದಪುರದ ಪತ್ರಕರ್ತ ಶಿವದೇವ್, ಆವರ್ತಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರೇಣುಕಾ ಸ್ವಾಮಿ, ದಿಲೀಪ್, ಜಗನ್ನಾಥ್, ಮೊದಲಾದವರಿದ್ದರು. ರಾಜ್ಯೋತ್ಸವದ ಅಂಗವಾಗಿ ಇಡೀ ಗ್ರಾಮವನ್ನು ತಳಿರು ತೋರಣಗಳು ಹಾಗೂ ಕನ್ನಡ ಬಾವುಟಗಳಿಂದ ಅಲಂಕರಿಸಲಾಗಿತ್ತು. ಇದೇ ಸಂದರ್ಭ ಕನ್ನಡ ಭಾಷೆಗೆ ರಾಷ್ಟ್ರಪೀಟ ಪ್ರಶಸ್ತಿಗಳನ್ನು ಗಳಿಸಿಕೊಟ್ಟ ಕನ್ನಡದ ಅಷ್ಟ ಕವಿಗಳ ಬಾವಚಿತ್ರಗಳನ್ನು ವೇದಿಕೆಯಲ್ಲಿ ಅಳವಡಿಸಲಾಗಿತ್ತು. ಹಾಗೆಯೇ ಇತ್ತೀಚೆಗೆ ನಿಧನರಾದ ಪಟೇಲ್ ಗುರುಮೂರ್ತಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಗಳಿಗೂ ಪುಷ್ಪನ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ 30 ವೈದ್ಯ ಸಿಬ್ಬಂದಿಗಳ ತಂಡ ಗ್ರಾಮಸ್ಥರಿಗೆ ಉಚಿತ ಆರೋಗ್ಯ ಶಿಬಿರ ನಡೆಸಿಕೊಟ್ಟಿತು. ಮಡಿಕೇರಿ ರಕ್ತ ನಿಧಿ ವಿಭಾಗದ ವತಿಯಿಂದ ರಕ್ತದಾನ ಶಿಬಿರವೂ ನಡೆಯಿತು. ಗ್ರಾಮದ ಮುಖಂಡ ಚಂದ್ರಶೇಖರ್ ಸ್ವಾಗತಿಸಿದರು. ಧರ್ಮ ನಿರೂಪಿಸಿದರು.











