
ಮಡಿಕೇರಿ ನ.26 NEWS DESK : ಕೊಡಗಿನ ಪವಿತ್ರ ಕಾವೇರಿ ನದಿಯ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಿ ಸಂರಕ್ಷಿಸುವ ಮತ್ತು ನದಿಯ ಪ್ರವಾಹ ನಿರ್ವಹಣೆ ಹಾಗೂ ನದಿ ತೀರದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಸಮಿತಿಯ ಪ್ರಮುಖರು ಮಾತನಾಡಿ, ಕಾವೇರಿ ನದಿಯ ಸಂರಕ್ಷಣೆ ಮತ್ತು ಅದರ ಪ್ರವಾಹ ನಿರ್ವಹಣೆ ನಮ್ಮೆಲ್ಲರ ಹೊಣೆಯಾಗಿದೆ. ಕಾವೇರಿಯು ಕರ್ನಾಟಕ ರಾಜ್ಯದ ಜೀವನದಿಯಾಗಿದ್ದು, ಅನ್ನದಾತ ರೈತರ ಪಾಲಿಗೆ ವರದಾನವಾಗಲಿದೆ. ಇದು ನಮ್ಮ ರಾಜ್ಯದ ಸಾಮಾಜಿಕ, ಆರ್ಥಿಕ ಸ್ಥಿತಿಗೆ ಮಹತ್ವದ ಕೊಡಗುಗೆ ನೀಡುತ್ತದೆ ಎಂದರು. ಕಾವೇರಿ ನದಿಯ ಮೂಲ ಪ್ರದೇಶಗಳು, ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ಅರಣ್ಯವನ್ನು ಮತ್ತು ಜಲಮೂಲಗಳನ್ನು ರಕ್ಷಿಸಲು ಬಹುಮುಖ್ಯವಾಗಿದೆ. ಕಾವೇರಿ ನದಿಯ ಹಾನಿಯು ನದಿ ದಡದ ಸಮೃದಧ ಪರಿಸರ, ಜನರ ಜೀವನ ಹಾಗೂ ಕೃಷಿಗೆ ಮಾರಕವಾಗಲು ಅಪಾಯ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ನದಿಯ ನೀರಿನ ಪ್ರಮಾಣವನ್ನು ಪೋಷಿಸುವುದು ಮತ್ತು ನದಿಯ ಪ್ರಕೃತಿ ಸ್ಥಿತಿಯನ್ನು ಕಾಪಾಡುವುದು ಮುಂದಿನ ಪೀಳಿಗೆಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಆದ್ದರಿಂದ ಸರಕಾರ ಈ ನದಿಯ ಸಂರಕ್ಷಣೆಗೆ ಹೆಚ್ಚಿನ ಶ್ರದ್ಧೆ ಮತ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಕೊಡಗಿನ ಅರಣ್ಯಗಳು ಮತ್ತು ನೀರಿನ ಮೂಲಗಳು ಈ ಪ್ರದೇಶದ ನೆಲೆ, ಪರಿಸರದ ಸಮತೋಲನ ಮತ್ತು ಜೀವ ವೈವಿಧ್ಯತೆಯಲ್ಲೂ ಮಹತ್ವಪೂರ್ಣ ಪಾತ್ರವಾಹಿಸುತ್ತದೆ. ಈ ಅಮೂಲ್ಯ ಪ್ರಕೃತಿದತ್ತ ಆಸ್ತಿಗಳನ್ನು ಪುನಃ ಸರಿಯಾದ ಸ್ಥಿತಿಗೆ ತಲುಪಿಸುವ ಕ್ರಮ ಕೈಗೊಳ್ಳಬೇಕು, ಒತ್ತುವರಿ ನದಿ ದಡದಲ್ಲಿ ಇರುವ ಒತ್ತುವರಿಗಳನ್ನು ಹಿಂಪಡೆಯುವ ಮೂಲಕ ನದಿಯ ನೈಸರ್ಗಿಕ ಸ್ಥಿತಿಯನ್ನು ಮತ್ತೆ ತಲುಪಿಸುವ ಕಾರ್ಯವಾಗಬೇಕು, ಕಾನೂನು ಅತಿಕ್ರಮಣಗಳನ್ನು ರದ್ದು ಮಾಡುವ ಮೂಲಕ ಸರಕಾರ ಕಾವೇರಿ ನದಿಗೆ ಸಮಯೋಚಿತ ನ್ಯಾಯ ಒದಗಿಸಿ ಕೊಡಗಿನ ಜೀವನದಿ ಕಾವೇರಿಯನ್ನು ಉಳಿಸಬೇಕೆಂದು ಒತ್ತಾಯಿಸಿದರು. ಕೊಡಗು ಅಭಿವೃದ್ಧಿ ಸಮಿತಿ ಸ್ಥಾಪಕ ಅಧ್ಯಕ್ಷ ಪ್ರಸನ್ನ ಭಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕರಾದ ಚಂದ್ರಮೋಹನ್, ಪ್ರಮುಖರಾದ ಲೀಲಾ ಶೇಷಮ್ಮ ಸೇರಿದಂತೆ ಮತ್ತಿತರರು ಇದ್ದರು.









