ಮಡಿಕೇರಿ ನ.26 NEWS DESK : ಸಮಸ್ತ ಉಲಮಾ ಸಂಘಟನೆಗೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.4 ರಿಂದ 8ರ ವರೆಗೆ ‘ಆದರ್ಶ ಪರಿಶುದ್ಧತೆ ಶತಮಾನಗಳಿಂದ’ ಎಂಬ ಘೋಷಣೆಯೊಂದಿಗೆ ಕೇರಳದ ಕಾಸರಗೋಡುವಿನ ಕುಣಿಯಲ್ಲಿ 100ನೇ ಅಂತರರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಲಿದೆ. ಇದರ ಪ್ರಚಾರಕ್ಕಾಗಿ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಒಕ್ಕೂಟದಿಂದ ನ.29 ರಂದು ‘ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನ’ವನ್ನು ಆಯೋಜಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಸ್ತ ಉಲಮಾ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಂ.ವೈ.ಅಶ್ರಫ್ ಫೈಝಿ ಅವರು, ನಗರದ ಗಾಂಧಿ ಮೈದಾನದಲ್ಲಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಕಲ್ಲುಬಾಣೆ ಅವರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 10 ಗಂಟೆಗೆ ಸಮ್ಮೇಳನದ ಅಧ್ಯಯನ ಶಿಬಿರ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು. ಮೊದಲನೇ ಹಂತದ ಅಧ್ಯಯನ ಶಿಬಿರದಲ್ಲಿ ‘ಆಧ್ಯಾತ್ಮಿಕತೆಯ ಅನಿವಾರ್ಯತೆ’ ಎಂಬ ವಿಷಯವನ್ನಾಧರಿಸಿ ಸಯ್ಯಿದ್ ಝನುಲ್ ಆಬಿದೀನ್ ತಂಙಳ್ ಬೆಳ್ತಂಗಡಿ ವಿಷಯ ಮಂಡಿಸಲಿದ್ದಾರೆ. ಎರಡನೇ ಹಂತದ ಶಿಬಿರದಲ್ಲಿ ‘ಸಂಘಟನೆಯ ಪ್ರಾಮುಖ್ಯತೆ’ ಎಂಬ ವಿಷಯವನ್ನಾಧರಿಸಿ ಇಬ್ರಾಹಿಂ ಪೈಝಿ ಪೇರಾಲ್ ಮಾತನಾಡಲಿದ್ದಾರೆ. ಸಂಜೆ 4 ಗಂಟೆಗೆ ಕೊಡಗು ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಸ್ತ ಕೇಂದ್ರೀಯ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರೂ ಹಾಗೂ ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ನೇತಾರರಾದ ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅಬ್ದುಲ್ ಸಲಾಂ ದಾರಿಮಿ ಆಲಂಬಾಡಿ, ಉಸ್ಮಾನುಲ್ ಫೈಝಿ ತೋಡಾರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಸತ್ತಾರ್ ಪಂದಲ್ಲೂರು, ಹೈದರ್ ದಾರಿಮಿ ಕರಾಯ, ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಫೈಝಿ ಸುಂಟಿಕೊಪ್ಪ, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ಕೆ.ಎ.ಯಾಕುಬ್ ಬಜೆಗುಂಡಿ, ಬಶೀರ್ ಹಾಜಿ ಪೆರುಂಬಾಡಿ ಸೇರಿದಂತೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಎಂ.ವೈ.ಅಶ್ರಫ್ ಫೈಝಿ ತಿಳಿಸಿದರು. ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಏಳಿಗೆಗೆ ಹಾಗೂ ಸಮಾಜದ ಶಾಂತಿಯನ್ನು ಕದಡುವ ಪಂಗಡಗಳ ವಿರುದ್ಧ 1926 ಏಪ್ರಿಲ್ 26 ರಂದು ಉಲಮಾ ಸಂಘಟನೆ ಸ್ಥಾಪನೆಯಾಯಿತು. ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಈಗಾಗಲೇ ವಿಶ್ವದ 35 ಕ್ಕಿಂತ ಹೆಚ್ಚು ಪ್ರದೇಶದಲ್ಲಿದ್ದು, ಭಾರತ ದೇಶದಲ್ಲಿಯೂ ತನ್ನ ಕಾರ್ಯವೈಖರಿಯನ್ನು ವಿಸ್ತರಿಸಿದೆ. ಇದು ಪ್ರಸ್ತುತ ಉಲಮಾ ಸಂಘಟನೆಯ ಅಧೀನದಲ್ಲಿ 11 ಸಾವಿರಕ್ಕಿಂತ ಹೆಚ್ಚು ಮದರಸಗಳು, ಒಂದು ಲಕ್ಷಕ್ಕೂ ಅಧಿಕ ಅಧ್ಯಾಪಕರು, ಸಾವಿರಾರು ಮೊಹಲ್ಲಾಗಳು, ಮುನ್ನೂರಕ್ಕೂ ಹೆಚ್ಚು ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾ ಕೇಂದ್ರಗಳು, 15 ಕ್ಕೂ ಅಧಿಕ ಪೋಷಕ ಸಂಘಟನೆಗಳನ್ನು ಹೊಂದಿದೆ. ಕೊಡಗು ಜಿಲ್ಲೆಯಲ್ಲಿ 1960ರ ನಂತರ ಉಲಮಾ ಸಂಘಟನೆ ಕಾರ್ಯಕ್ರಮ ಆರಂಭಿಸಿದ್ದು, ಹಲವು ಮದರಸಾಗಳು ಮತ್ತು ಮೊಹಲ್ಲಾಗಳಿವೆ. ಸುಂಟಿಕೊಪ್ಪ ಜೂನಿಯರ್ ಶರೀಲಿತ್ ಕಾಲೇಜು, ಪೆರುಂಬಾಡಿ ಶಂಸುಲ್ ಉಲಮಾ ಎಜುಕೇಶನ್ ಅಕಾಡೆಮಿ, ಸಿದ್ದಾಪುರ ವರಕ್ಕಲ್ ಸ್ಮಾರಕ ಭವನ ಮತ್ತಿತರ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಜಿಲ್ಲಾ ಜಂಇಯ್ಯತುಲ್ ಉಲಮಾ ನೇತೃತ್ವ ನೀಡುತ್ತಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮದರಸ ಅಧ್ಯಾಪಕರಿಗೆ ಉಚಿತ ವಸತಿ ಯೋಜನೆ, ರೋಗಿಗಳಿಗೆ ಚಿಕಿತ್ಸಾ ನೆರವು ಮತ್ತು ವಿವಿಧ ರೀತಿಯ ವಿದ್ಯಾಭ್ಯಾಸ ಯೋಜನೆಗಳನ್ನು ಹಮ್ಮಿಕೊಂಡು ಬಂದಿದೆ. ಕೊಡಗು ಜಿಲ್ಲೆಗೆ ಉಲಮಾ ಒಕ್ಕೂಟ ವಿವಿಧ ಕೊಡುಗೆಯನ್ನು ನೀಡಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಎಂ.ಎಂ.ಅಬ್ದುಲ್ಲಾ ಫೈಝಿ, ಸಮಸ್ತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಸಿ.ಉಸ್ಮಾನ್ ಫೈಝಿ, ಸಂಘಟನಾ ಕಾರ್ಯದರ್ಶಿ ವೈ.ಎಂ.ಉಮರ್ ಫೈಝಿ, ಸಹ ಕಾರ್ಯದರ್ಶಿ ಝೈನುದ್ದೀನ್ ಫೈಝಿ ಹಾಗೂ ಸದಸ್ಯ ಪಿ.ಎಂ.ಆರಿಫ್ ಫೈಝಿ ಉಪಸ್ಥಿತರಿದ್ದರು.











