ಸೋಮವಾರಪೇಟೆ ನ.27 NEWS DESK : ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹಾಗೂಮಹಾಸಭಾದ ಸೋಮವಾರಪೇಟೆ ತಾಲ್ಲೂಕು ಘಟಕ ಹಾಗೂ ಮಹಾಸಭಾದ ಯುವ ಘಟಕದ ವತಿಯಿಂದ ತಾಲ್ಲೂಕಿನ ಗೌಡಳ್ಳಿ ಬಿ.ಜಿ.ಎಸ್.ವಿದ್ಯಾಸಂಸ್ಥೆಯ ಆವರಣದಲ್ಲಿ ಬಸವಣ್ಣನವರ ಜಯಂತಿ, ಹಾನಗಲ್ ಕುಮಾರಸ್ವಾಮಿ ಜಯಂತಿ, ಡಾ ಶಿವಕುಮಾರ ಸ್ವಾಮೀಜಿ ಹಾಗೂ ರೇಣುಕಾಚಾರ್ಯ ಜಯಂತಿ ಅಂಗವಾಗಿ ಧಾರ್ಮಿಕ ಸಭೆ , ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ , ಬಸವಣ್ಣನ ಅನುಯಾಯಿಗಳಾದ ನಾವು ಸಮಾಜ ಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದರು. ಕಲುಷಿತಗೊಳ್ಳುತ್ತಿರುವ ಸಾಮಾಜಿಕ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಪ್ರತಿಯೊಬ್ಬರೂ ಬಸವಾದಿ ಶರಣರ ಜೀವನ ಮತ್ತು ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಡಾ ಮಂತರ್ ಗೌಡ ಸಲಹೆ ನೀಡಿದರು. ಇಂದು ನಮ್ಮ ನಾಡಿನಲ್ಲಿ ಮಠ- ಮಾನ್ಯಗಳು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ನೀಡುತ್ತಿರುವ ಸೇವಾ ಕಾರ್ಯಗಳು ಅನನ್ಯವಾದದ್ದು. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು. :: ಬಸವ ಭವನ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ರೂ.10 ಲಕ್ಷ ಅನುದಾನದ ಭರವಸೆ :: ವೀರಶೈವ- ಲಿಂಗಾಯತ ಜಿಲ್ಲಾ ಮಹಾಸಭಾದ ವತಿಯಿಂದ ಕುಶಾಲನಗರದಲ್ಲಿ ನಿರ್ಮಿಸಲುದ್ದೇಶಿರುವ ಸಮಾಜದ ‘ಬಸವ ಭವನ’ ಕಟ್ಟಡ ನಿರ್ಮಾಣಕ್ಕೆ ತಮ್ಮ ಶಾಸಕರ ಅನುದಾನದಲ್ಲಿ ರೂ. 10 ಲಕ್ಷ ಅನುದಾನವನ್ನು ಒದಗಿಸುವುದಾಗಿ ಶಾಸಕ ಡಾ ಮಂತರ್ ಗೌಡ ಭರವಸೆ ನೀಡಿದರು. :: ಶರಣರ ಚಿಂತನೆ ಸರ್ವಕಾಲೀಕ :: ಧಾರ್ಮಿಕ ಸಭೆಯಲ್ಲಿ ಧರ್ಮ ಮತ್ತು ಸಮಾಜದ ಕುರಿತು ಆಶಯ ಭಾಷಣ ಮಾಡಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಸಮಾನತೆ ಸಾರಿದ ಶರಣರ ಚಿಂತನೆಗಳಿಗೆ ಸಮನಾದ ಶಕ್ತಿ ಇಲ್ಲ. ಎಲ್ಲ ಕಾಲಕ್ಕೂ ಶರಣರ ಚಿಂತನೆಗಳು ಅನ್ವಯವಾಗುವುದು ಶರಣ ತತ್ವಗಳ ಚಿಂತನೆಯ ವಿಶೇಷತೆ ಎಂದು ಹೇಳಿದರು. “ನುಡಿದಂತೆ ನಡೆ- ನಡೆದಂತೆ ನುಡಿ” ಎಂದು ತಿಳಿಸುವ ಶರಣರ ವಚನಗಳು, ಕಾಯಕ, ದಾಸೋಹ ಮತ್ತು ಪ್ರಸಾದ ಸಂಸ್ಕೃತಿಯನ್ನು ಸಾರುತ್ತಿವೆ. ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗಿವೆ ಎಂದರು. ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ,ಪ್ರಸ್ತುತ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ವೀರಶೈವ ಸಮಾಜವು ಇವುಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಯುವಕರು ಪಡೆದುಕೊಳ್ಳಲು ವಿದ್ಯಾವಂತ ರಾಗಬೇಕು ಎಂದು ಕರೆ ನೀಡಿದರು. ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ದುಡಿದು ತಿನ್ನಬೇಕು ಎನ್ನುವುದು ಕಾಯಕ ತತ್ತ್ವದ ಮೂಲ ಸಂದೇಶವಾಗಿದೆ ಎಂದರು. ಸಾಹಿತಿ ಪ್ರಭಾಕರ್ ಶಿಶಿಲ ಅವರು ದೊಡ್ಡರಾಜೇಂದ್ರ ಅವರ ಕುರಿತು ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿದ ಮಹಾಸಭಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಭ ಮಾತನಾಡಿ, ಮಹಿಳೆಯರು ಶಿವ ಶರಣೆಯರ ಆದರ್ಶ ಹಾಗೂ ಸಂಸ್ಕಾರಗಳನ್ನು ಮೈಗೂಢಿಸಿಕೊಳ್ಳಬೇಕು ಎಂದರು. ಮಹಾಸಭಾದ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಐಹಿಕ ಸಂಪತ್ತಿನ ಹೆಚ್ಚಳಕ್ಕಿಂತ ಆತ್ಮ ತೃಪ್ತಿ ಬಹಳ ದೊಡ್ಡದು. ಅದೇ ಶರಣರ ಸಂದೇಶ ಎಂದು ಬಣ್ಣಿಸಿದರು. ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣರ ಕಾಯಕ, ದಾಸೋಹ ಮತ್ತು ಪ್ರಸಾದ ತತ್ವಗಳು ವ್ಯಕ್ತಿಯ ಜೀವನವನ್ನು ಆರೋಗ್ಯಪೂರ್ಣವನ್ನಾಗಿಸಿ ಸಂತೃಪ್ತ ಜೀವನ ನಡೆಸಲು ಸಹಕಾರಿಯಾಗಿವೆ ಎಂದರು. ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಅಂತರಂಗದಲ್ಲಿರುವ ಅವಗುಣಗಳನ್ನು ಕಳೆದುಕೊಂಡರೆ ಮಾನವ ಮಹಾ ಮಾನವನಾಗಲು ಸಾಧ್ಯ ಎಂದರು. ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಜಾತಿ ಸೂತಕ, ಲಿಂಗ ತಾರತಮ್ಯಗಳಿಲ್ಲದ ಶರಣರ ದೃಷ್ಟಿ ಅನನ್ಯ, ಸರ್ವಮಾನ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಇಂತಹ ಧಾರ್ಮಿಕ ಸಮ್ಮೇಳನಗಳು ಸಮಾಜದಲ್ಲಿ ಪ್ರೀತಿ- ವಿಶ್ವಾಸ, ಸ್ನೇಹಪರತೆ ಹಾಗೂ ಸಹಬಾಳ್ವೆ ನಡೆಸಲು ಸಹಕಾರಿಯಾಗಿವೆ ಎಂದರು. ಜಿಲ್ಲಾ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ.ಉದಯ್ ಕುಮಾರ್, ಮಹಾಸಭಾದ ಉಪಾಧ್ಯಕ್ಷರಾದ ಡಿ.ಜೆ.ರಶ್ಮಿ, ಪ್ರವೀಣ್, ದಾಸೋಹ ಸಂಚಾಲಕರೂ ಆದ ನಿರ್ದೇಶಕ ಬಾಲಶಂಕರ್, ಮಹಾಸಭಾದ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಕೆ.ಪಿ.ಆದರ್ಶ್ , ಕಾರ್ಯದರ್ಶಿ ಎಂ.ಎನ್. ಚಂದ್ರಶೇಖರ್, ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧುಸೂದನ್, ಕಟ್ಟಡ ದಾನಿ, ನಿವೃತ್ತ ಕಂದಾಯಾಧಿಕಾರಿ ಎಂ.ಬಿ.ಬಸವರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಕ್ಷಿತ್ ರಾಜ್, ಪದಾಧಿಕಾರಿಗಳಾದ ಶಿವಾನಂದ್, ಭರತ್, ವಿವಿಧ ಘಟಕಗಳ ಪದಾಧಿಕಾರಿಗಳು,ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ ಸ್ವಾಗತಿಸಿದರು. ಮಹಾಸಭಾದ ತಾಲ್ಲೂಕು ಘಟಕದ ಕಾರ್ಯದರ್ಶಿ ಉಷಾರಾಣಿ ವಂದಿಸಿದರು. *ಬಹುಮಾನ ವಿತರಣೆ*: ಇದೇ ವೇಳೆ ಕ್ರಿಕೆಟ್ ಟೂರ್ನಿ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತಗೊಂಡವರಿಗೆ ಮಹಾಸಭಾದ ವತಿಯಿಂದ ಟ್ರೋಫಿ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.











