ಮಡಿಕೇರಿ ನ.27 NEWS DESK : ಸಮಾಜ, ಧರ್ಮ ನಿರಪೇಕ್ಷತೆ, ಜಾತ್ಯತೀತತೆ ಇವೇ ನಮ್ಮ ಸಂವಿಧಾನದ ತತ್ವಗಳು. ಇವೇ ಸಂವಿಧಾನದ ಸಿದ್ಧಾಂತಗಳು. ಇದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಕೂಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ, ಕಾನೂನು-ಮಾನವ ಹಕ್ಕು-ಆರ್ಟಿಐ ವಿಭಾಗವು, ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ” ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ಪ್ರಪಂಚದಲ್ಲಿರುವ ಲಿಖಿತ ಸಂವಿಧಾನದಲ್ಲಿ, ರೀಬಿಲ್ ಮಾಡುವ ಅವಕಾಶವಿಲ್ಲ. ಆದರೆ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ, ಕಾನೂನನ್ನು ಹಿಂದಕ್ಕೆ ಪಡೆಯುವ ಅವಕಾಶ ಕಲ್ಪಿಸಿದ್ದಾರೆ. ಆರ್ಟಿಕಲ್ 14, ಸಮಾನತೆ, ಸಮಾಜದಲ್ಲಿ ಎಲ್ಲಾ ಜಾತಿ, ಧರ್ಮ, ಲಿಂಗ, ಪಂಗಡ ಸಮಾನವಾಗಿ ಜೀವನ ನಡೆಸಬೇಕು ಎಂದು ತಿಳಿಸುತ್ತದೆ. ಸಂವಿಧಾನ ಅರ್ಥ ಮಾಡಿಕೊಂಡರೆ, ಈ ಸಂವಿಧಾನ ನಮ್ಮನ್ನು, ನಮ್ಮ ಪಕ್ಷವನ್ನು ರಕ್ಷಣೆ ಮಾಡುತ್ತದೆ. ಸಂವಿಧಾನದ ಮೇಲೆ ಜನರ ವಿಶ್ವಾಸ ಕಳೆದು ಕೊಂಡಾಗ ನಮಗೆ ಅಪಾಯಕಾರಿಯಾದಂತ ಪರಿಸ್ಥಿತಿ ಉಂಟಾಗುತ್ತದೆ. ಸಂವಿಧಾನವನ್ನು ಅರ್ಥಮಾಡಿ ಕೊಂಡಂತೆ ಸಂವಿಧಾನದ ಪೀಠಿಕೆ ಉದಾರಣೆಯಾಗಿದೆ ಎಂದು ಅವರು ತಿಳಿಸಿದರು. ದೇಶದ ಸಂಪತ್ತು ಕ್ರೋಢೀಕರಣವಾಗಬಾರದು. ಸಮಾನವಾಗಿ ಹಂಚಿಕೆ ಮಾಡುವುದೇ ಸಂವಿಧಾನದ ನಡೆ. ಈ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸಹಿ ಮಾಡಿದ ಐದು ಗ್ಯಾರೆಂಟಿ ಕಾರ್ಡನ್ನು ಮನೆ ಮನೆಗೆ ನೀಡಿದ್ದೇವೆ. ಸಂವಿಧಾನ ಓದಿಕೊಂಡವರು ನಮ್ಮ ಐದು ಗ್ಯಾರಂಟಿಗಳ ಟೀಕೆ ಮಾಡಲು ಸಾಧ್ಯವಿಲ್ಲ ಎಂದರು. ಬುದ್ಧಿಶಕ್ತಿಯಿಂದ ಸಂಪತ್ತನ್ನು ಗಳಿಸುವ ಶಕ್ತಿ ಸಂವಿಧಾನದಲ್ಲಿದೆ. ಆದರೆ ದೇಶದ ಸಂಪತ್ತು ಕ್ರೋಢೀಕರಣ ಮಾಡಲು ಬಿಡಬಾರದು. ದೇಶದ ಸಂಪತ್ತನ್ನು ಬಡವರಿಗೆ, ಶೋಷಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ ಹಂಚುವ ಕೆಲಸವನ್ನು ಗ್ಯಾರಂಟಿ ಮೂಲಕ ಮಾಡಿದ್ದೇವೆ. ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದ್ದೇವೆ. ಸಂವಿಧಾನವನ್ನು ಅರಿತು, ಸಂವಿಧಾನದ ಆಶಯವನ್ನು, ಸಂವಿಧಾನದ ತತ್ವಗಳನ್ನು ಜನರಿಗೆ ಮುಟ್ಟುವ ಕೆಲಸವನ್ನು ಮಾಡುವ ಮೂಲಕ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.











