ವಿರಾಜಪೇಟೆ ನ.27 NEWS DESK : ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ.ಘಟಕ, ಎನ್.ಎಸ್.ಎಸ್ ಮತ್ತು ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಸಂವಿಧಾನ ದಿನ ಆಚರಿಸಲಾಯಿತು. ಭಾರತದ ಸಂವಿಧಾನ ಪ್ರಸ್ತಾವನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಅರ್ಜುನ್ ಮೌರ್ಯ ಅವರು ಸಂವಿಧಾನ ಪ್ರಸ್ತಾವನೆ ಮತ್ತು ಅಂಬೇಡ್ಕರ್‍ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ವಯವಾಗುವಂತಹ ಸಂವಿಧಾನವನ್ನು ದೇಶಕ್ಕೆ ಕೊಟ್ಟ ಕೀರ್ತಿ ನಮ್ಮದು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯವನ್ನೊಳಗೊಂಡ ನಮ್ಮ ಸಂವಿಧಾನವು ಜಗತ್ತಿನಲ್ಲಿ ಶ್ರೇಷ್ಠ ಮತ್ತು ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ. ಕಾನೂನಿಗೆ ಸಂಬಂಧಿಸಿದ ಯಾವುದೇ ವಿಚಾರಗಳಿಗೂ ಭಾರತೀಯ ಸಂವಿಧಾನದ ಒಳಗಡೆ ಪರಿಹಾರ ಇದ್ದೇ ಇದೆ. ಇಂತಹ ಸಂವಿಧಾನವನ್ನು ರಚನೆ ಮಾಡಿ ನೀಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂವಿಧಾನವನ್ನು ಕುರಿತ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕೊಡಗು ವಿಶ್ವವಿದ್ಯಾನಿಲಯದ ರಾ.ಸೇ.ಯೋ.ಯ ನೋಡಲ್ ಅಧಿಕಾರಿ ಪ್ರೊ. ದಯಾನಂದ ಕೆ.ಸಿ. ಅವರು ಮಾತನಾಡಿ, ಭಾರತೀಯ ಸಂವಿಧಾನವು ರಚನೆ, ಬೆಳವಣಿಗೆಯನ್ನು ವಿವರಿಸುತ್ತಾ ಸಂವಿಧಾನದ ಆಶಯಗಳು ಉಳಿಯಬೇಕಾದರೆ ಅದನ್ನು, ಕೇವಲ ತಾತ್ವಿಕ ಸಿದ್ಧಾಂತವನ್ನಾಗಿ ನೋಡದೇ, ಪ್ರತಿಯೊಬ್ಬ ಭಾರತೀಯರ ಬದುಕಿನ ಮೂಲ ತಳಹದಿಯಾಗಿರಬೇಕೆಂದು ಅಭಿಪ್ರಾಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸರಸ್ವತಿ ಡಿ.ಕೆ., ನಮ್ಮ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನವಾಗಿದೆ. ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಗೌರವ ಮತ್ತು ಪ್ರತಿಷ್ಠೆಯ ರೂಪದಂತಿರುವುದು ನಮ್ಮ ಹೆಮ್ಮೆ. ಸಂವಿಧಾನದ ಈ ಮೌಲ್ಯವನ್ನು ಗೌರವಿಸಿ, ಅನುಸರಿಸುವ ಮೂಲಕ ಸಮಾಜ ಮತ್ತಷ್ಟು ಸದೃಢವಾಗುತ್ತದೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಸ್ತಾವನೆ ಪಠಣೆ, ಘೋಷವಾಕ್ಯ ಬರಹ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರರ ವಿಭಾಗದ ಉಪನ್ಯಾಸಕರಾದ ಹೇಮಂತ್ ಕುಮಾರ್ ಬಹುಮಾನ ನೀಡಿದರು. ಸಂವಿಧಾನ ದಿನಾಚರಣೆಯ ಬಗ್ಗೆ ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ರುದ್ರ ಪ್ರಾಸ್ತಾವಿಕವಾಗಿ ಮತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕರಾದ ಪ್ರೊ.ಬಸವರಾಜು ಕೆ., ನಿಹಾಲ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಿವ್ಯ ಎಂ.ಬಿ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕ-ಸೇವಕಿಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.











