ಸಿದ್ದಾಪುರ ನ.27 NEWS DESK : ಇತಿಹಾಸ ಪ್ರಸಿದ್ಧ ಬೈರಂಬಾಡದ ಸುಬ್ರಹ್ಮಣ್ಯ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕರ ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು. ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ಮೂರ್ನಾಡು, ನಾಪೊಕ್ಲು, ವಿರಾಜಪೇಟೆ, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಒಂಟಿಯಂಗಡಿ, ಮರಗೋಡು, ಹಾಕತ್ತೂರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ತೀರ್ಥಪ್ರಸಾದ ಸ್ವೀಕರಿಸಿದರು. ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ತಪಣೆ ನಡೆಯಿತು. ದೇವಾಲಯದ ಹೊರಭಾಗದಲ್ಲಿ ಹರಕೆ ಹೊತ್ತ ಭಕ್ತಾದಿಗಳು ಬೆಳಿಗ್ಗೆಯಿಂದ ಕೇಶ ಮುಂಡನ ನೆರವೇರಿಸಿದರು. ಭಕ್ತಾದಿಗಳಿಗೆ ಕುಳಿತುಕೊಳ್ಳಲು ಸೂಕ್ತ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಸರ್ಕಲ್ ಇನ್ಸ್ಪೆಕ್ಟರ್ ಪಿ.ಕೆ.ರಾಜು, ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಸ್ಥಾನ ಸಮಿತಿ ಮುಖ್ಯಸ್ಥರಾದ ಬೆಳ್ಳಿಯಪ್ಪ, ಅಯ್ಯಪ್ಪ, ಕರುಂಬಯ್ಯ, ಮುತ್ತಣ್ಣ, ಮಾದಪ್ಪ, ಪೆಮ್ಮಯ್ಯ, ಸುಬ್ರಮಣಿ, ಮುತ್ತಯ್ಯ, ಮಾದಪ್ಪ ಸಮಿತಿಯ ಪ್ರಮುರು ಕಾರ್ಯಕರ್ತರು ಹಾಜರಿದ್ದರು.











