ಮಡಿಕೇರಿ ನ.27 NEWS DESK : ಸಂವಿಧಾನವು ಭಾರತ ದೇಶದ ಪ್ರಜಾಪ್ರಭುತ್ವದ ಮೂಲಭೂತ ಆಧಾರವಾಗಿದ್ದು, ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಬಲಪಡಿಸುವ ಮಹತ್ವದ ದಾಖಲೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ರಾಘವ.ಬಿ ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್‍ಸಿಸಿ ವಿಭಾಗದ ವತಿಯಿಂದ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆದ ಭಾರತ ಸಂವಿಧಾನ ದಿನಾಚರಣೆಯನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ರಚನೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಸಭಾ ಸದಸ್ಯರ ಅಮೂಲ್ಯ ಕೊಡುಗೆಯನ್ನು ಅವರು ಸ್ಮರಿಸಿದರು. 1949 ರ ನವೆಂಬರ್ 26 ರ ದಿನ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿದ್ದನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಸಂವಿಧಾನ ದಿನವಾಗಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಭಾಗವಾಗಿ ಸಂವಿಧಾನ ಪ್ರಸ್ತಾವನೆಯ ಸಾಮೂಹಿಕ ವಾಚನ ಮಾಡಿಸುವುದರ ಜೊತೆಗೆ ಸಾಮಾಜಿಕ ನ್ಯಾಯ, ಸಾಮಾಜಿಕ ಸಮಾನತೆ ಮತ್ತು ತಾರತಮ್ಯದ ವಿರುದ್ಧ ಇರುವ ಸಾಂವಿಧಾನಿಕ ಅವಕಾಶಗಳನ್ನು ಉಲ್ಲೇಖಿಸುತ್ತಾ ಸಂವಿಧಾನದ ವಿಧಿ 14 ರಲ್ಲಿ ಹೇಳಿರುವ ಸಮಾನತೆ ಹಕ್ಕು ಮತ್ತು ಸಂವಿಧಾನದ ವಿಧಿ 15 ತಾರತಮ್ಯವನ್ನು ಹೋಗಲಾಡಿಸುವ ಹಕ್ಕುಗಳ ಪ್ರಾಮುಖ್ಯತೆಯನ್ನು ಕುರಿತು ಮಾಹಿತಿ ನೀಡಿದರು. ಭಾರತದ ಪ್ರಜೆಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನೆನಪು ಮಾಡಿಕೊಳ್ಳುತ್ತಾ ಸಮಾಜದಲ್ಲಿ ಭ್ರಾತೃತ್ವ, ಸ್ವಾತಂತ್ರ್ಯ ಸಾರ್ವಭೌಮ, ಸಮಾಜವಾದದ ಪರಿಕಲ್ಪನೆಗಳು, ವಿವಿಧತೆಯಲ್ಲಿ ಏಕತೆ, ಕುರಿತು ಸಂವಿಧಾನದ ಮೂಲ ಉದ್ದೇಶಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರುಗಳಾದ ಪ್ರೊ.ತಿಪ್ಪೇಸ್ವಾಮಿ ಇ, ಪ್ರೊ.ಗಾಯತ್ರಿದೇವಿ, ಪ್ರೊ.ಶ್ರೀಧರ್ ಹೆಗಡೆ, ತಳವಾರ್ ಬಿ.ಹೆಚ್ ಹಾಗೂ ಉಪನ್ಯಾಸಕರಾದ ಖುರ್ಷಿದ ಭಾನು, ನೀವಿಯಾ ಮೇದಪ್ಪ ಹಾಗೂ ಬೋಧಕ ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ.ಕೆ.ಎಸ್.ಶೃಂಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.











