ಮಡಿಕೇರಿ ನ.29 NEWS DESK : ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ನ ಪ್ಲಾಸ್ಟಿಕ್ ಬಾಟಲ್ ಗಳ ಮಾರಾಟವನ್ನು ನಿಷೇಧಿಸಿರುವಂತೆ ಕೊಡಗು ಜಿಲ್ಲೆಯಾದ್ಯಂತ ಈ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ವಿರಾಜಪೇಟೆಯ ಯೋಗೇಶ್ ನಾಯ್ಡು ಟಿ.ಎಂ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಅವರು ಪ್ಲಾಸ್ಟಿಕ್ ಬಾಟಲ್ ಗಳಿಂದ ಜಿಲ್ಲೆಯ ಪರಿಸರದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮದ ಕುರಿತು ವಿವರಿಸಿದರು. ಪ್ಲಾಸ್ಟಿಕ್ ಬಾಟಲಿಗಳ ನಿಷೇಧದ ಕ್ರಮ ಮಡಿಕೇರಿ ನಗರದಲ್ಲಿ ಯಶಸ್ವಿಯಾಗಿದೆ. ಆದರೆ ಜಿಲ್ಲೆಯ ಇತರ ಭಾಗಗಳಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ನ ಪ್ಲಾಸ್ಟಿಕ್ ಬಾಟಲ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ ರಾಶಿ ಕಂಡು ಬರುತ್ತಿದ್ದು, ಅಶುಚಿತ್ವಕ್ಕೆ ಕಾರಣವಾಗಿದೆ. ಚರಂಡಿ ಮತ್ತು ತೋಡುಗಳಲ್ಲಿ ನೀರಿನ ಹರಿವಿಗೂ ತೊಡಕುಂಟಾಗುತ್ತಿದೆ. ವಿರಾಜಪೇಟೆ ಭಾಗದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು ವ್ಯಾಪಕವಾಗಿ ಕಂಡು ಬರುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ ಸಮಾಜಕ್ಕಾಗಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಅರ್ಧ ಲೀಟರ್ ಮತ್ತು ಒಂದು ಲೀಟರ್ ನ ಪ್ಲಾಸ್ಟಿಕ್ ಬಾಟಲ್ ಗಳ ಮಾರಾಟವನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದರು.











