
ಬೆಂಗಳೂರು ಡಿ.1 NEWS DESK : ದಕ್ಷ ಆಡಳಿತಗಾರರಾಗಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆದರ್ಶಗಳ ಹಾದಿಯಲ್ಲಿ ಸರಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದಲ್ಲಿರುವ ಹನುಮಂತಯ್ಯನವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿ, ಗೌರವ ಸಮರ್ಪಿಸಿದರು. ಕೆಂಗಲ್ ಹನುಮಂತಯ್ಯನವರು ಒಬ್ಬ ದಕ್ಷ ಆಡಳಿತಗಾರರಾಗಿದ್ದು, ಕರ್ನಾಟಕದ ಎರಡನೇ ಮುಖ್ಯಮಂತ್ರಿಯಾಗಿದ್ದರು. ಸ್ವಾತಂತ್ರ್ಯನಂತರವಿದ್ದ ಸಮಸ್ಯೆಗಳನ್ನು ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಎದುರಿಸಿದರು. ವಿಧಾನಸೌಧದ ಭವ್ಯ ಕಟ್ಟಡ ನಿರ್ಮಾಣಕ್ಕೆ ಅವರು ರೂವಾರಿಯಾಗಿದ್ದರೂ, ಕಟ್ಟಡದ ಉದ್ಘಾಟನೆಯ ವೇಳೆಗೆ ಅವರು ಅಧಿಕಾರದಲ್ಲಿರಲಿಲ್ಲ. ಜನಪ್ರತಿನಿಧಿಯಾಗಿ ಪ್ರಮಾಣಿಕ ಜನರ ಸೇವೆ ಸಲ್ಲಿಸುವುದು ಅತಿಮುಖ್ಯ ಎಂದು ವಿಧಾನಸೌಧದ ಕಟ್ಟಡದ ಪೂರ್ವಭಾಗದಲ್ಲಿ’ಜನರ ಕೆಲಸ ದೇವರ ಕೆಲಸ’ ಎಂದು ಕೆತ್ತಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕೆಂಗಲ್ ಹನುಮಂತಯ್ಯ ಅವರ ಸೇವೆಯನ್ನು ಸರಕಾರ ಸ್ಮರಿಸುತ್ತಿದೆ. ಅವರ ಆದರ್ಶಗಳ ಹಾದಿಯಲ್ಲಿ ನಡೆಯುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ ಎಂದರು. ಕೆಂಗಲ್ ಹನುಮಂತಯ್ಯನವರ ಮೊಮ್ಮಗನಾದ ಕೆಂಗಲ್ ಶ್ರೀಪಾದ ರೇಣು, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿ ಹಲವು ಗಣ್ಯರು ಈ ವೇಳೆ ಉಪಸ್ಥಿತರಿದ್ದರು.









