ಸುಂಟಿಕೊಪ್ಪ ಡಿ.3 NEWS DESK : ಪ್ರತಿಭಾ ಕಾರಂಜಿ ಕೇವಲ ಸ್ಪರ್ಧೆಯಲ್ಲ, ಬದಲಿಗೆ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುವ ಒಂದು ಬೃಹತ್ ಕಲಿಕೆಯ ಹಬ್ಬವಾಗಿದೆ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ಸೋಮಯ್ಯ ತಿಳಿಸಿದರು. 7ನೇ ಹೊಸಕೋಟೆಯ ದೀಪ್ತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಎನ್ನುವುದು ಶಾಲಾ ಮಟ್ಟದಲ್ಲಿ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮತ್ತು ಹೊರತರಲು ಇರುವ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಕೇವಲ ಶೈಕ್ಷಣಿಕವಲ್ಲದೆ, ಚಿತ್ರಕಲೆ, ಹಾಡು, ನೃತ್ಯ, ನಾಟಕ, ಕಥೆ ಹೇಳುವುದು, ಭಾಷಣ, ಜಾನಪದ ಕಲೆ, ವಿಜ್ಞಾನ ಮಾದರಿಗಳ ಪ್ರದರ್ಶನ ಮುಂತಾದ ಅನೇಕ ಸ್ಪರ್ಧೆಗಳಿಗೆ ಅವಕಾಶ ನೀಡುತ್ತದೆ. ಇದರಿಂದ ಮಕ್ಕಳಿಗೆ ಆತ್ಮಸ್ಥೈರ್ಯ ಹೆಚ್ಚಾಗಿ, ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಛದ್ಮವೇಷ ಅಭಿನಯ ಗೀತೆ, ಜಾನಪದ ನೃತ್ಯ, ದೇಶಭಕ್ತಿ ಗೀತೆ, ಭಾಷಣ ಚಿತ್ರಕಲೆ ಇನ್ನಿತರ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ಜೋಸೆಫ್, ಅಭಿವೃದ್ಧಿ ಅಧಿಕಾರಿ ನಂದೀಶ್, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜಿಜಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸೀಮಾ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯವರಾದ ಬಿ.ಎನ್, ಸೌಭಾಗ್ಯ, ಸರ್ಕಾರಿ ಪ್ರೌಢಶಾಲಾ 7ನೇ ಹೊಸಕೋಟೆ ಮುಖ್ಯ ಶಿಕ್ಷಕರಾದ ಸೋಮಯ್ಯರವರು, ಪ್ರೌಢಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿಯವರಾದ ಶೈಲಾ, ಮಾದಾಪುರ ಕ್ಲಸ್ಟರ್‍ನ ಸಿ ಆರ್ ಪಿ ಟಿ.ಈ ಮಂಜುನಾಥ್, ಶಿಕ್ಷಕರಾದ ಎ.ಎಂ.ಭರತ್, ಬಿಪಿನ್, ಎಸ್.ಆರ್.ಶಿವಲಿಂಗ ಇತರರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು.











