ಮಡಿಕೇರಿ NEWS DESK ಡಿ.3 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 31ನೇ ವರ್ಷದ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯನ್ನು ಆದಿಮಸಂಜಾತ ಆನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಸಕಲ ಜನಪದ ಪರಂಪರೆಯAತೆ ರೋಹಿಣಿ ನಕ್ಷತ್ರದ ಆರಂಭದಲ್ಲಿ ಡಿ.4 ರಂದು ಬೆಳಿಗ್ಗೆ 10 ಗಂಟೆಗೆ ಬಾಳೆಲೆ ಹೋಬಳಿಯ “ಪತ್ತ್ ಕಟ್” ನಾಡ್ ನ ಬಿಳೂರು ಗ್ರಾಮದಲ್ಲಿ ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಗುರುವಾರ ಬೆಳಿಗ್ಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ನೇತೃತ್ವದಲ್ಲಿ ಕದಿರು ತೆಗೆಯುವ ಮೂಲಕ ‘ಪುತ್ತರಿ ನಮ್ಮೆ’ಯನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೇಳಿದ್ದಾರೆ. ಕೊಡವರ ರಾಜ್ಯಾಂಗದತ್ತ ಹಕ್ಕುಗಳ ಮಂಡನೆಗೆ ಪೂರಕವಾಗಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಾಗೂ ಹಸ್ತಾಂತರಿಸುವ ಉದ್ದೇಶದಿಂದ ಕಳೆದ ಮೂರು ದಶಕಗಳಿಂದ ಕೊಡವರ ಎಲ್ಲಾ ಹಬ್ಬಗಳನ್ನು ಸಿಎನ್‌ಸಿ ಸಂಘಟನೆ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ.
ಅತೀ ಸಣ್ಣ ಕೊಡವ ಸಮುದಾಯದ ಜನ್ಮಭೂಮಿ, ಪೂರ್ವಾರ್ಜಿತ ಭೂಮಿ, ಭಾಷೆ, ಸಂಸ್ಕೃತಿ, ಪರಂಪರೆ, ಜನಪದ ಮತ್ತು ಸ್ವಯಂ ನಿರ್ಣಯದ ಹಕ್ಕುಗಳಿಗೆ ವಿಶ್ವ ರಾಷ್ಟ್ರ ಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಘೋಷಣೆಯಡಿಯಲ್ಲಿ ಮತ್ತು ಸಂವಿಧಾನದ 14, 19, 21, 51ಎ(ಎಫ್), 29, 30, 25, 26, 347, 350 ಇವುಗಳನ್ವಯ ಸಂವಿಧಾನದ 5, 6 ಮತ್ತು 8ನೇ ಶೆಡ್ಯೂಲ್ ಒಳಗೊಂಡಂತೆ ರಾಜ್ಯಾಂಗದತ್ತ ಹಕ್ಕುಗಳ ಮಂಡನೆಗೆ ಕಾರ್ಯಕ್ರಮದಲ್ಲಿ ಒತ್ತು ನೀಡಲಾಗುವುದು. ಗುರು-ಹಿರಿಯರು, ಪೂರ್ವಿಕರು, ಜಲದೇವಿ ಕಾವೇರಿ, ಭೂದೇವಿ, ವನದೇವಿ, ಪರ್ವತ ದೇವಿ ಮತ್ತು ಸೂರ್ಯ-ಚಂದ್ರರನ್ನು ಭಕ್ತಿ ಭಾವದಿಂದ ನೆನೆದು ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್-ಕತ್ತಿಗೆ ಪವಾಡ ಸದೃಶದ ಗೆಜ್ಜೆತಂಡ್‌ಗೆ ಶ್ರದ್ಧಾಪೂರ್ವಕ ಪೂಜೆ ನೆರವೇರಿಸಲಾಗುವುದು. ದುಡಿಕೊಟ್ಟ್ ಪಾಟ್ ಮೂಲಕ ಭತ್ತದ ಗದ್ದೆಗೆ ತೆರಳಿ ಕದಿರು ತೆಗೆದು ವಿವಿಧ ಕೊಡವ ಜನಪದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು. ‘ಪುತ್ತರಿ ನಮ್ಮೆ’ಯ ಪ್ರಯುಕ್ತ ಸಾಂಪ್ರದಾಯಿಕ ಕೊಡವ ಭಕ್ಷ್ಯಗಳನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಎನ್.ಯು.ನಾಚಪ್ಪ ಮಾಹಿತಿ ನೀಡಿದ್ದಾರೆ.










