ಮಡಿಕೇರಿ ಡಿ.3 NEWS DESK : ಎಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಚಾರಕ್ಕೆ ಈಗಾಗಲೇ ಕೇಂದ್ರ ಸರಕಾರ ಜಾರಿಗೆ ತಂದಿರುವ ಆದೇಶಗಳನ್ವಯ ಕೆಲವು ವಿನಾಯಿತಿಗಳನ್ನು ನೀಡಬೇಕು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಆದೇಶಕ್ಕೆ ವಿರುದ್ಧವಾದ ನಿಯಮಗಳನ್ನು ಜಾರಿಗೆ ತರಬಾರದೆಂದು ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದ ಚಾಲಕರು ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಆಟೋ ಮಾಲೀಕರು ಹಾಗೂ ಚಾಲಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸರಕಾರದ ಆದೇಶದ ಪ್ರಕಾರ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಓಡಿಸಲು ರಹದಾರಿಯ ಅಥವಾ ಅನುಮತಿಯ ಅಗತ್ಯವಿಲ್ಲ. ಆದರೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇನ್ನು ಮುಂದೆ ರಹದಾರಿ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಅಲ್ಲದೆ ಕೇವಲ 15 ಕಿ.ಮೀ ದೂರ ಮಾತ್ರ ಓಡಿಸಲು ಅವಕಾಶವಿದೆ ಎಂದಿದ್ದಾರೆ. ಇದು ಸರಕಾರದ ನಿಯಮಕ್ಕೆ ವಿರುದ್ಧವಾದ ಕ್ರಮ ಎಂದು ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಆರೋಪಿಸಿದರು. ಸರಕಾರದ ನಿಯಮವನ್ನು ಪಾಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.











