ಮಡಿಕೇರಿ ಡಿ.3 NEWS DESK : ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ ಧೋರಣೆಯನ್ನು ನುಸರಿಸುತ್ತಿದೆ, ಬೆಳೆಹಾನಿ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿಯ ರೈತ ಮೋರ್ಚಾ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು. ರಾಜ್ಯ ಸರಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಮಾಜಿ ಶಾಸಕರು ಹಾಗೂ ಬಿಜೆಪಿ ಪ್ರಮುಖರು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು 5 ತಿಂಗಳಿಗೂ ಹೆಚ್ಚಿನ ಕಾಲ ವಿಸ್ತರಿಸಿದ ಪರಿಣಾಮ ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕವಾದ ಕೃಷಿ ಹಾನಿಯಾಗಿದೆ. ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಕಾಫಿ, ಕರಿಮೆಣಸು ಕೃಷಿಗಳಿಗೆ ಶೇ.60 ರಿಂದ 70 ರಷ್ಟು ನಷ್ಟ ಉಂಟಾಗಿದೆ. ಈ ಕುರಿತು ಸರ್ವೇ ನಡೆಸಿದ ಸರ್ಕಾರ ಕೇವಲ ಶೇ.30 ರಷ್ಟು ಮಾತ್ರ ಕೃಷಿ ಹಾನಿಯಾಗಿದೆ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿಕರು ಪರಿಹಾರದಿಂದ ವಂಚಿತರಾಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಜನತೆಯನ್ನು ಕಂಗೆಡಿಸುತ್ತಿರುವ ಸಿ ಮತ್ತು ಡಿ ದರ್ಜೆಯ ಭೂಮಿಯ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ವಿಧಾನ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು, ಕೇಂದ್ರ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಕೃಷಿಕ ಸಮೂಹಕ್ಕೆ ಎಲ್ಲಾ ವಿಧದಲ್ಲೂ ತೊಂದರೆಗಳನ್ನು ನೀಡುತ್ತಲೆ ಬರುತ್ತಿದೆ. ಸರ್ಕಾರದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಸಿ ಮತ್ತು ಡಿ ಜಮೀನಿಗೆ ಸಂಬಂಧಿಸಿದಂತೆ, ಪ್ರಾಣಿಜನ್ಯ ಉತ್ಪನ್ನಗಳಾದ ಕೊಂಬು, ಗರಿಗಳನ್ನು ಇರಿಸಿಕೊಳ್ಳಬಾರದೆಂದು, ಆಯಾ ಪಂಚಾಯ್ತಿ ವ್ಯಾಪ್ತಿಯ ಖಾಸಗಿ ಜಮೀನುಗಳಲ್ಲಿನ ಮರಗಳ ವಿವರ ಒದಗಿಸುವ ಕುರಿತು, ಅರಣ್ಯ ಪ್ರದೇಶಕ್ಕೆ ದನ ಕರುಗಳು ಹೋದರೆ ಪ್ರಕರಣ ದಾಖಲಿಸುವುವುದು ಸೇರಿದಂತೆ ಜನ ವಿರೋಧಿಯಾದ ಐದು ಸುತ್ತೋಲೆಗಳನ್ನು ಹೊರಡಿಸಿದ್ದಾರೆ. ಇವುಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಸುತ್ತೋಲೆಗಳನ್ನು ಹಿಂದಕ್ಕೆ ಪಡೆಯುವ ಪ್ರಯತ್ನ ಜಿಲ್ಲೆಯ ಶಾಸಕರಿಂದ ನಡೆದಿಲ್ಲವೆಂದು ಆರೋಪಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಕಳೆದ ಐದಾರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಸಮೂಹ ಸಂಕಷ್ಟದಿಂದ ಕಣ್ಣೀರು ಹಾಕುತ್ತಿದ್ದರು, ಕಾಂಗ್ರೆಸ್ ನಾಯಕರು ‘ಬ್ರೇಕ್ ಫಾಸ್ಟ್’ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು. ಚೆಂಬು ಗ್ರಾಮದ ದಬ್ಬಡ್ಕದಲ್ಲಿ 1937 ರಲ್ಲಿ ಜಾಗದ ಪಟ್ಟೆ ಹೊಂದಿಕೊಂಡಿರುವ ವ್ಯಕ್ತಿಯ ಜಾಗದ ಪಟ್ಟೆಯನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ. ಸಿ ಮತ್ತು ಡಿ ಜಾಗದ ಸಮಸ್ಯೆ ಕೇವಲ ಸೋಮವಾರಪೇಟೆ ತಾಲ್ಲೂಕಿಗಷ್ಟ ಸೀಮಿತವಾಗಿಲ್ಲ, ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸಲು ಸರಕಾರದಿಂದ ಸಾಧ್ಯವಾಗಿಲ್ಲ ಎಂದರು. ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ರಾಬಿನ್ ದೇವಯ್ಯ, ತಳೂರು ಕಿಶೋರ್ ಕುಮಾರ್, ಹರಪ್ಪಳ್ಳಿ ರವೀಂದ್ರ, ಬಿ.ಬಿ.ಭಾರತೀಶ್, ಶಾಂತೆಯಂಡ ರವಿ ಕುಶಾಲಪ್ಪ, ಅನಿತಾ ಪೂವಯ್ಯ, ಮಹೇಶ್ ಜೈನಿ, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಅರುಣ್ ಶೆಟ್ಟಿ, ಎಸ್.ಸಿ. ಸತೀಶ್, ಸಬಿತಾ, ಮಂಜುಳಾ, ಉಷಾ ಕಾವೇರಮ್ಮ, ಚಂದ್ರು, ನಾಗೇಶ್ ಕುಂದಲ್ಪಾಡಿ, ಉಮಾಪ್ರಭು, ಸಜಿಲ್ ಕೃಷ್ಣ, ಉಮೇಶ್ ಸುಬ್ರಮಣಿ, ಬಾಲಕೃಷ್ಣ ಮತ್ತಿತರ ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.











