ಮಡಿಕೇರಿ ಡಿ.3 NEWS DESK : ಜಿಲ್ಲೆಯ ಶೋಷಿತ ಸಮೂಹಗಳಾದ ಪರಿಶಿಷ್ಟರು ಹಾಗೂ ಆದಿವಾಸಿಗಳ ಸಂಕಷ್ಟಗಳಿಗೆ ಸ್ಪಂದಿಸುವಂತೆ ಆಗ್ರಹಿಸಲು ಇದೇ ತಿಂಗಳಿನಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳ ಶಾಸಕರನ್ನು ಭೇಟಿಯಾಗುವ ‘ಆದಿವಾಸಿಗಳ ನಡೆ ಶಾಸಕರ ಮನೆ ಕಡೆ’ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಆಲ್ ಇಂಡಿಯಾ ಯುನೈಟೆಡ್ ಕಿಸಾನ್ ಸಭಾ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ನಮ್ಮ ಸಂಕಷ್ಟಗಳನ್ನು ಅವರ ಮುಂದಿಡಲಾಗುತ್ತದೆ. ಇದಕ್ಕೆ ಅವರಿಂದ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಕಳೆದ ಚುನಾವಣಾ ಸಂದರ್ಭದಲ್ಲಿ ದಲಿತ ಆದಿವಾಸಿಗಳ ಸಂಪೂರ್ಣ ಬೆಂಬಲದೊಂದಿಗೆ ಆಯ್ಕೆಯಾಗಿ ಬಂದ ಜಿಲ್ಲೆಯ ಇಬ್ಬರು ಶಾಸಕರುಗಳ ಬಗ್ಗೆ ಇದ್ದ ಆಶಾಭಾವನೆ ಇಂದು ಕರಗಿದೆ. ಇವರು ಜಿಲ್ಲೆಯ ನೊಂದ, ದೌರ್ಜನ್ಯಗಳಿಗೆ ಒಳಗಾಗಿರುವ ಆದಿವಾಸಿಗಳ ಸಮಸ್ಯೆಯ ಪರಿಹಾರಕ್ಕೆ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು. ಜಿಲ್ಲೆಯಲ್ಲಿಂದು ಸಹಸ್ರಾರು ಏಕರೆ ಸರ್ಕಾರಿ ಜಾಗ ಉಳ್ಳವರಿಂದ ಅತಿಕ್ರಮಣಕ್ಕೆ ಒಳಗಾಗಿದೆ. ದಕ್ಷಿಣ ಕೊಡಗಿನ ಕುಟ್ಟಂದಿ ಎಂಬಲ್ಲಿ ನೂರಾರು ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಅಲ್ಲಿ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ಈ ಜಾಗವನ್ನು ತೆರವುಗೊಳಿಸುವಂತೆ ಮಾಡಿಕೊಂಡ ಮನವಿಗೆ ಶಾಸಕರು ಸ್ಪಂದಿಸಿಲ್ಲ. ಪ್ರಸ್ತುತ ಉಳ್ಳವರ ಪರವಾಗಿ ಭೂ ಗುತ್ತಿಗೆಯನ್ನು ಜಾರಿ ಮಾಡಲು, ಉಳ್ಳವರಿಂದಲೆ ಅತಿಕ್ರಮಣಕ್ಕೆ ಒಳಗಾದ ಸಿ ಮತ್ತು ಡಿ ಜಮೀನು ಸಮಸ್ಯೆ ಬಗೆಹರಿಕೆಯ ನಿಟ್ಟಿನಲ್ಲಿ ಶ್ರಮಿಸುವ ಶಾಸಕರು, ಆದಿವಾಸಿ ಸಮೂಹದ ನೆರವಿಗೆ ಬರುತ್ತಿಲ್ಲ. ಇದರಿಂದ ಶೋಷಿತರ ಅಭಿವೃದ್ಧಿ ಎನ್ನುವುದು ಗಗನ ಕುಸುಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದಲಿತ ಆದಿವಾಸಿ ಕುಟುಂಬಗಳಿಗೆ ಕನಿಷ್ಟ 5 ಸೆಂಟ್ಸ್ ನಿವೇಶನ ನೀಡಬೇಕು, ಒತ್ತುವರಿ ಭೂಮಿಯನ್ನು ತೆರವುಗೊಳಿಸಿ, ಬಡಮಂದಿಗೆ ತಲಾ 2 ಏಕರೆ ಭೂಮಿ ಒದಗಿಸಬೇಕು, ಸಿ ಮತ್ತು ಡಿ ಭೂಮಿಯಲ್ಲಿ ಉಳ್ಳವರ ಒತ್ತುವರಿಯನ್ನು ತೆರವುಗೊಳಿಸಿ, ಬಡವರ ಸಾಗುವಳಿಯನ್ನು ಖಾಯಂಗೊಳಿಸಬೇಕು, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತರಬೇಕೆಂದು ನಿರ್ವಾಣಪ್ಪ ಒತ್ತಾಯಿಸಿದರು. ಸುದ್ದು ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಜೆ.ಪ್ರಕಾಶ್, ಆದಿವಾಸಿ ಕೃಷಿ ಕಾರ್ಮಿಕರ ಸಂಘದ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ, ಕಾರ್ಯದರ್ಶಿ ರವಿ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ ಹಾಗೂ ಸಿಪಿಐ(ಎಂಎಲ್) ಕೊಡಗು ಜಿಲ್ಲಾ ಕಾರ್ಯದರ್ಶಿ ವೈ.ಎಂ. ಸುರೇಶ್ ಉಪಸ್ಥಿತರಿದ್ದರು.











