
ಮಡಿಕೇರಿ ಡಿ.3 NEWS DESK : ವಿಶೇಷಚೇತನರಿಗೆ ಅನುಕಂಪದ ಬದಲು ಅವಕಾಶಗಳನ್ನು ಕಲ್ಪಿಸಿದ್ದಲ್ಲಿ ಇತರರಂತೆ ಜೀವನ ನಡೆಸಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ವಿಶೇಷ ಚೇತನರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದು ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ ಮತ್ತು ವಿಶೇಷಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಮಕ್ಕಳ ಶಾಲೆಗಳು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಓಂಕಾರ ಸದನದಲ್ಲಿ ಬುಧವಾರ ‘ಸಾಮಾಜಿಕ ಪ್ರಗತಿ ಸಾಧಿಸಲು ವಿಶೇಷ ಚೇತನರನ್ನು ಒಳಗೊಂಡ ಸಮಾಜ ರೂಪಿಸುವುದು’ ಎಂಬ ಘೋಷವಾಕ್ಯದೊಂದಿಗೆ ನಡೆದ ವಿಶ್ವ ವಿಶೇಷಚೇತನರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ವಿಶೇಷ ಚೇತನರಿಗೂ ಸಹ ಭಾವನೆಗಳಿದ್ದು, ಅವರಿಗೆ ಅವಕಾಶಗಳನ್ನು ನೀಡಿದ್ದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಪ್ರೋತ್ಸಾಹಿಸುವಂತಾಗಬೇಕು ಎಂದು ಡಾ.ಮಂತರ್ ಗೌಡ ಸಲಹೆ ನೀಡಿದರು. ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಇರುವ ಸೌಲಭ್ಯಗಳನ್ನು ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು. ವಿಶೇಷಚೇತನರ ಸಾಂಸ್ಕøತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ ವಿಶೇಷ ಚೇತನರು ಯಾವುದೇ ಕಾರಣಕ್ಕೂ ಕೊರಗದೆ, ಮರುಗದೆ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಅಗಾಧ ಶಕ್ತಿ ಇದ್ದು, ಅದನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು ಎಂದು ಹೇಳಿದರು. ಹುಟ್ಟಿದ ಮೇಲೆ ಜೀವನ ನಡೆಸುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ವಿಕಲಚೇತನರನ್ನು ಸಮಾಜದಲ್ಲಿ ಗೌರವಿಸಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಲಭ್ಯವಾಗಬೇಕು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ವಿವಿಧ ಇಲಾಖೆಗಳ ಸಹಕಾರದಲ್ಲಿ ವಿಶೇಷ ಚೇತನರಿಗೆ ಆಧಾರ್ ಕಾರ್ಡ್ ಹಾಗೂ ವಿವಿಧ ಪ್ರಮಾಣ ಪತ್ರ ಕೊಡಿಸಲು ಪ್ರಯತ್ನಿಸಲಾಗಿದೆ. ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಾಗಿದ್ದು, ಇದೊಂದು ಆತ್ಮ ತೃಪ್ತಿಯ ಕೆಲಸವಾಗಿದೆ ಎಂದು ಶುಭ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ ಸಮಾಜದಲ್ಲಿ ಎಲ್ಲಾ ತರಹದ ಜನರು ಇದ್ದು, ಪ್ರತಿಯೊಬ್ಬರೂ ಸಮಾಜದ ಆಸ್ತಿ ಎಂದು ತಿಳಿಯಬೇಕು ಎಂದರು. ‘ಥಾಮಸ್ ಅಲ್ವಾ ಎಡಿಸನ್ ಅವರು ಶಾಲೆಗೆ ತೆರಳುವ ಸಂದರ್ಭದಲ್ಲಿ ಪಾಠ ಪ್ರವಚನ ಅರ್ಥವಾಗುತ್ತಿಲ್ಲ ಎಂದು ಹೇಳುತ್ತಿದ್ದರು. ಇದನ್ನು ತಿಳಿದ ಎಡಿಸನ್ ಅವರ ತಾಯಿ ಮಗನನ್ನು ಅತ್ಯುತ್ತಮವಾಗಿ ಬೆಳೆಸಬೇಕೆಂಬ ಗಟ್ಟಿ ಮನಸ್ಸು ಮಾಡಿದ್ದರು. ಅದರಂತೆ 2 ಸಾವಿರಕ್ಕೂ ಹೆಚ್ಚು ಸಂಶೋಧನೆ ಮಾಡಿ, ದೊಡ್ಡ ವಿಜ್ಞಾನಿಯಾದರು. ಇಂದಿಗೂ ಸಹ ಅವರ ದಾಖಲೆ ಅಳಿಸಲು ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿವರಿಸಿದರು.’ ಥಾಮಸ್ ಅಲ್ವಾ ಎಡಿಸನ್ ಸೇರಿದಂತೆ ವಿಶ್ವದಲ್ಲಿ ಅನೇಕ ವಿಶೇಷಚೇತನರು ತಮ್ಮದೇ ವಿಜ್ಞಾನ ಸಂಶೋಧನೆ ಮೂಲಕ ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಧೃತಿಗೆಡದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಸ್ಟೀಪನ್ ಅವರು ವಿಕಲಚೇತನರಾಗಿ ಹಲವು ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ವಿಕಲಚೇತನರು ಜಗ್ಗದೆ, ಕುಗ್ಗದೆ ಮುಂದೆ ಸಾಗಬೇಕು ಎಂದರು. ಪಾಲಿಬೆಟ್ಟದ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕೊಡಗು ಜಿಲ್ಲಾ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರ ಸಂಘದ ಅಧ್ಯಕ್ಷರಾದ ಶಿವರಾಜ್ ಅವರು ಮಾತನಾಡಿ ವಿಶೇಷ ಚೇತನರಿಗೆ ಶಾಲೆಯಲ್ಲಿ ಹಲವು ಕಲಿಕಾ ಕ್ರಮದ ಮೂಲಕ ಶಿಕ್ಷಣ ನೀಡಲಾಗುತ್ತಿದೆ ಎಂದರು. ಜಿಲ್ಲಾ ವಿಶೇಷ ಚೇತನರ ಸಂಘದ ಅಧ್ಯಕ್ಷರಾದ ಮಹೇಶ್ವರ್ ಜೆ.ಎ. ಅವರು ಮಾತನಾಡಿ ಸರ್ಕಾರದ ಸೌಲಭ್ಯಗಳು ಮತ್ತಷ್ಟು ತಲುಪಬೇಕು. ವಿಕಲಚೇತನರನ್ನು ಇತರರಂತೆ ಕಾಣಬೇಕು ಎಂದು ಹೇಳಿದರು. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಜಿ.ವಿಮಲ ಅವರು ಸ್ವಾಗತಿಸಿ, ಮಾತನಾಡಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ನಿರ್ದೇಶಕರಾದ ಡಾ.ದೀಪಾಶ್ರೀ ಎಸ್.ಆರ್., ಪಾಲಿಬೆಟ್ಟದ ವಿಶೇಷ ಶಾಲೆಯ ಮುಖ್ಯಸ್ಥರಾದ ಗೀತಾ ಚಂಗಪ್ಪ, ಪುನೀತ ರಾಮಸ್ವಾಮಿ, ಕಾರ್ಮಿಕ ಅಧಿಕಾರಿ ಟಿ.ಕಾವೇರಿ, ಎಂ.ಎಂ.ಯತ್ನಟ್ಟಿ, ಕಾರ್ಯಕ್ರಮ ಸಂಯೋಜಕರಾದ ಅಂಕಚಾರಿ, ಅವರು ಇದ್ದರು. ವಿಶೇಷ ಚೇತನರಾದ ಮೂರ್ನಾಡು ರಮೇಶ್ ಅವರು ಪ್ರಾರ್ಥಿಸಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಸಿಎಸ್‍ಆರ್ ನಿಧಿಯಿಂದ ಇಬ್ಬರು ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಹಸ್ತಾಂತರಿಸಿದರು. ಹಾಗೆಯೇ ಒಬ್ಬ ವಿಶೇಷ ಚೇತನರಿಗೆ ಬ್ರೈಲ್ ಕಿಟ್ ವಿತರಿಸಿದರು.












