ಮಡಿಕೇರಿ NEWS DESK ಡಿ.3 : ಹೃದಯಾಘಾತದ ಸಂದರ್ಭ “ಸಮಯವೇ ಜೀವನ”, ಯಾಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೀಡುವ ತಕ್ಷಣದ ನೆರವು ಮತ್ತು ವೈದ್ಯಕೀಯ ಚಿಕಿತ್ಸೆ ರೋಗಿಯ ಜೀವ ಉಳಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಅಬ್ದುಲ್ ಅಜೀಜ್ ಅವರು ತಿಳಿಸಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕಾಲೇಜ್ ನಲ್ಲಿ ನಡೆದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಬೇಕು, ಸೂಕ್ತ ಕ್ರಮ ಕೈಗೊಂಡರೆ ಜೀವ ರಕ್ಷಣೆ ಸಾಧ್ಯ. ಹೃದಯ ಸ್ತಂಭನದ ಕುರಿತು ಜಾಗೃತಿ, ತುರ್ತು ನೆರವು ಹಾಗೂ ಆರೋಗ್ಯಕರ ಜೀವನಶೈಲಿ ನಮ್ಮ ಹೃದಯದ ರಕ್ಷಕರು. ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಪಡೆದಲ್ಲಿ ಇನ್ನೊಬ್ಬರ ಜೀವನವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಅಗತ್ಯತೆಯ ಕುರಿತು ಮಾಹಿತಿ ಮತ್ತು ಆಪತ್ಕಾಲದಲ್ಲಿ ಸಿಲುಕಿದವರ ಪ್ರಾಣವನ್ನು ಉಳಿಸಬಹುದಾದ ಕ್ರಮಗಳ ಬಗ್ಗೆ ಡಾ.ಅಬ್ದುಲ್ ಅಜೀಜ್ ಸಲಹೆ ನೀಡಿದರು. ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ಪ್ರಥಮ ಚಿಕಿತ್ಸೆ ತರಬೇತಿ ಜೀವ ರಕ್ಷಿಸುವ ಕೌಶಲ್ಯ. ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸರಿಯಾದ ಕ್ರಮ ಕೈಗೊಳ್ಳುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ಪ್ರಥಮ ಚಿಕಿತ್ಸೆಯ ಜ್ಞಾನ ಎಂಬುವುದು ಕೇವಲ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸೀಮಿತವಾಗಿರದೇ ಸಮಾಜದ ಎಲ್ಲಾ ನಾಗರೀಕರ ಜವಾಬ್ದಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ನಾಗರೀಕರು ಈ ರೀತಿಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸಂಕಷ್ಟದಲ್ಲಿರುವವರ ಜೀವವನ್ನು ಉಳಿಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಶೈಕ್ಷಣಿಕ ಕ್ಷೇತ್ರದ ಭಾಗವಾದ ಎನ್‌ಸಿಸಿ ವಿದ್ಯಾರ್ಥಿಗಳು ಇಂತಹ ತರಬೇತಿಗಳಲ್ಲಿ ಭಾಗವಹಿಸಿ, ಕೌಶಲ್ಯವನ್ನು ಪಡೆದುಕೊಳ್ಳಬೇಕು. ಆ ಮೂಲಕ ಗ್ರಾಮೀಣ ಭಾಗದ ಪ್ರದೇಶಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆರವಾಗಲು ಸಾಧ್ಯವಾಗುತ್ತದೆ ಎಂದರು. ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವಿಜಯ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಹೃದಯಘಾತದ ಸಂದರ್ಭ ಸಿಪಿಆರ್ ಪ್ರಥಮ ಚಿಕಿತ್ಸೆ, ಪಾರ್ಶ್ವವಾಯು, ನಾಯಿ ಕಡಿತ, ಮೂರ್ಚೆರೋಗ, ವಿಷಪೂರಿತ ಹಾವು ಕಡಿತ, ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿದಾಗ, ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಮತ್ತಿತರ ತುರ್ತು ಸಂದರ್ಭಗಳಲ್ಲಿ ಹೇಗೆ ಪ್ರಥಮ ಜೀವ ರಕ್ಷಕರಾಗಿ ಚಿಕಿತ್ಸೆಯನ್ನು ನೀಡಿ, ಪ್ರಾಥಮಿಕ ಹಂತದ ಚಿಕಿತ್ಸಾ ಕ್ರಮವನ್ನು ನಿರ್ವಹಿಸಬಹುದು ಎಂಬುವುದನ್ನು ವಿವರಿಸಿದರು. ಶಿಬಿರದಲ್ಲಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಸಿಬ್ಬಂದಿಗಳು, ಉಪನ್ಯಾಸಕರಾದ ಖುರ್ಷಿದ ಭಾನು, ಎನ್‌ಸಿಸಿ ವಿದ್ಯಾರ್ಥಿ ನಾಯಕರಾದ ಕೆ.ಎಂ.ತಿಮ್ಮಯ್ಯ, ವಂಶಿಕ್ ಸೋಮಣ್ಣ, ಸೇಜಲ್, ಎಂ.ಎಸ್.ಆಶಿತ, ಬೋಧಕ-ಬೋಧಕೇತರ ವರ್ಗ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಎನ್‌ಸಿಸಿ ನಾಯಕಿ ಚರಿಷ್ಮಾ ರೈ ಹಾಗೂ ಕೆಡೆಟ್ ರಕ್ಷಿತಾ ಪ್ರಾರ್ಥಿಸಿದರು. ಕೆಡೆಟ್ ಸಂದೇಶ್ ನಿರೂಪಿಸಿ, ವಂದಿಸಿದರು.











