
ಮಡಿಕೇರಿ ಡಿ.4 NEWS DESK : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಟಿಇಟಿ)ಯನ್ನು ಸರ್ಕಾರದ ನಿರ್ದೇಶನ ಹಾಗೂ ಮಾರ್ಗಸೂಚಿಯಂತೆ ನಿಯಮಾನುಸಾರ ನಡೆಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಸಿದ್ಧತೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಗೊಂದಲಗಳಿಗೆ ಅವಕಾಶ ಮಾಡದೆ, ಸುಸೂತ್ರವಾಗಿ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಇರಬೇಕು. ಯಾವುದೇ ರೀತಿ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಗಾಳಿ, ಬೆಳಕು, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತಿತರ ಕನಿಷ್ಠ ಸೌಲಭ್ಯ ಇರಬೇಕು ಎಂದು ಸಲಹೆ ನೀಡಿದರು. ಟಿಇಟಿ ಪರೀಕ್ಷೆಗೆ ನಿಯೋಜಿಸಿರುವ ಮೇಲ್ವಿಚಾರಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ಕಳೆದ ಬಾರಿಯಂತೆ ಈ ಬಾರಿಯು ಸಹ ವೆಬ್‍ಕಾಸ್ಟಿಂಗ್ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಅವರು ಜಿಲ್ಲೆಯಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ಡಿ.7 ರಂದು ನಡೆಯಲಿದ್ದು, ಅಂದು ಬೆಳಗ್ಗೆ ಮೊದಲ ಅಧಿವೇಶನ 9.30 ಯಿಂದ ಮಧ್ಯಾಹ್ನ 12 ಗಂಟೆಗೆ, ಹಾಗೂ ಎರಡನೇ ಅಧಿವೇಶನವು 2 ರಿಂದ ಆರಂಭವಾಗಿ 4.30 ಗಂಟೆವರೆಗೆ ನಡೆಯಲಿದ್ದು, ಬೆಳಗ್ಗೆ ನಡೆಯುವ ಪರೀಕ್ಷೆಯಲ್ಲಿ 683 ಮತ್ತು ಮಧ್ಯಾಹ್ನ ನಡೆಯುವ ಪರೀಕ್ಷೆಯಲ್ಲಿ 1303 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಪ್ರೌಢಶಾಲೆ, ನಗರದ ಸರ್ಕಾರಿ ಪ್ರಥಮ ದರ್ಜೆ, ಸಂತ ಮೈಕಲರ ಕಾಲೇಜು, ಸಂತ ಮೈಕಲರ ಪದವಿ ಪೂರ್ವ ಕಾಲೇಜು ಈ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದರು. ಟಿಇಟಿ ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಯನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಪರೀಕ್ಷೆಯನ್ನು ಸುಗಮವಾಗಿ, ಸುಲಲಿತವಾಗಿ ನಡೆಸಲು ಮತ್ತಿತರ ಸಂದರ್ಭದಲ್ಲಿ ಅಗತ್ಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಪರೀಕ್ಷಾ ನೋಡಲ್ ಅಧಿಕಾರಿ ಬಿಂಧು ಅವರು ಟಿಇಟಿ ಪರೀಕ್ಷೆ ಮಾರ್ಗಸೂಚಿ ಬಗ್ಗೆ ವಿವರಿಸಿದರು. ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಕೂಡಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲರಾದ ಸ್ವಾಮಿ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಆರ್.ಮಹೇಶ್, ಶಶಿಕಲಾ, ಸಂತ ಮೈಕಲರ ಪ್ರೌಢ ಶಾಲೆಯ ಜಫೀರ್ ಇತರರು ಇದ್ದರು.











