
ಮಡಿಕೇರಿ ಡಿ.4 NEWS DESK : ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ ಸಹಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಹಾಡಿರೆ ರಾಗಗಳ ತೂಗಿರೆ ದೀಪಗಳ’ ವಿಶೇಷ ಘಟಕ ಯೋಜನೆಯಡಿ ನಡೆದ ಹಾಡು, ನೃತ್ಯ ವಿಶೇಷ ಹಾಗೂ ವಿಭಿನ್ನತೆಯೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಗಳಿಗೆ ಸಾಕ್ಷಿಯಾಯಿತು. ಬೆಂಗಳೂರಿನ ಜೋಗಿಲ ಸಿದ್ದರಾಜು ಮತ್ತು ತಂಡದವರು ಹಾಡಿರೆ ರಾಗಗಳ ತೂಗಿರೆ ದೀಪಗಳ ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುವೆ ನಿನ್ನ ಆಟ ಬಲ್ಲವರ್ಯಾರೂ, ಶಿವನೇ ನಿನ್ನ ಆಟ ಬಲ್ಲವರ್ಯಾರೂ, ಚೆಲ್ಲಿದರೂ ಮಲ್ಲಿಗೆಯ ಬಾನಸು ಏರಿ ಮೇಲೆ, ಮಾದಪ್ಪ ಬರುವಾಗ, ಮಾಳೆಲ್ಲಾ ಗಮ್ಮೆಂದಿತು, ಮತ್ತಿತರ ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಲಾಪ್ರೇಮಿಗಳನ್ನು ಕುಣಿಯುವಂತೆ ಮಾಡಿದ್ದು, ವಿಶೇಷವಾಗಿತ್ತು. ಮೈಸೂರು ಜಿಲ್ಲೆ ಎಚ್‍ಡಿಕೋಟೆ ತಾಲ್ಲೂಕಿನ ದೇವರಾಜು ಮತ್ತು ತಂಡದವರು ಸುಗಮ ಸಂಗೀತ ನುಡಿಸುವ ಮೂಲಕ ಗಮನ ಸೆಳೆದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಮಹೇಶ್ ಕುಮಾರ್ ಮತ್ತು ತಂಡದವರು ರಂಗ ಗೀತೆ ಹಾಡುವ ಮೂಲಕ ಗಮನ ಸೆಳೆದರು. ವಿರಾಜಪೇಟೆ ತಾಲ್ಲೂಕಿನ ಚೆನ್ನಯ್ಯನ ಕೋಟೆಯ ಪವಿತ್ರ ಎಚ್.ಆರ್. ತಂಡದವರು ಕೊಡವ ಓಲಗ ನುಡಿಸುವ ಮೂಲಕ ಕೊಡಗಿನ ಸಾಂಸ್ಕೃತಿಕ ಮಹತ್ವವನ್ನು ಸಾರಿದರು. ಹಾಗೆಯೇ ರಾಮನಗರ ಜಿಲ್ಲೆಯ ಸಂತೋಷ್ ಆರ್. ತಂಡದವರು ಡೊಳ್ಳು ಕುಣಿತ ಕಾರ್ಯಕ್ರಮ ನೀಡುವ ಮೂಲಕ ರಂಜಿಸಿದರು. ಒಟ್ಟಾರೆ ಇಡೀ ಕಾರ್ಯಕ್ರಮ ಸಂಗೀತಮಯವಾಗಿ ಎಲ್ಲರಲ್ಲಿಯೂ ಹಾಡು ಹಾಡುವಂತೆ ಪ್ರೇರೇಪಿಸಿತ್ತು. ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ಮಡಿಕೇರಿ ತಹಶೀಲ್ದಾರ್ ಶ್ರೀಧರ್ ಅವರು ನಾಡು, ನುಡಿ, ಭಾಷೆ, ಮತ್ತು ಜಾನಪದ ಕಲೆ ಹೆಚ್ಚಾಗಿ ಬೆಳೆಸಬೇಕು ಎಂದು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲೂಕು ಜಾನಪದ ಪರಿಷತ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಜಿಲ್ಲಾ ಲಯನ್ಸ್ ಟ್ರಸ್ಟ್, ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಹಾಡಿರೆ ರಾಗಗಳ ತೂಗಿರೆ ದೀಪಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆ ಬೆಳೆಸುವುದು ಎಲ್ಲರ ಕರ್ತವ್ಯ ಹಾಗೂ ಪ್ರತಿಯೊಬ್ಬರು ಜಾನಪದ ಸೊಗಡನ್ನು ಬೆಳೆಸಲು ಮುಂದಾಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್ ಅವರು ಡೊಳ್ಳು ಬಾರಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜಾನಪದ ನಮ್ಮೆಲ್ಲರ ಜೀವನಾಡಿ ಹಾಗೂ ಜಾನಪದ ಸಂಗೀತವು ಮನಸ್ಸಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು. ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ. ಸೃಜನಾತ್ಮಕ ಮತ್ತು ಸಮೂಹ ಕೌಶಲ್ಯ ಬೆಳೆಸುತ್ತದೆ. ಭಾಷೆ ಕೌಶಲ್ಯ, ಗಣಿತ, ವಿಜ್ಞಾನ, ದೈಹಿಕ ಸಮಾನತೆಯನ್ನು ನೂತನಗೊಳಿಸುತ್ತದೆ ಎಂದು ಹೇಳಿದರು. ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಸಂರಕ್ಷಿಸಲು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಆನಂದವನ್ನು ಹೆಚ್ಚಿಸಲು ಸಂಗೀತ ತುಂಬಾ ಅನುಕೂಲ ಮಾಡಿಕೊಟ್ಟಿದೆ ಎಂದರು. ವಿದ್ಯಾರ್ಥಿಗಳು ಸಂಗೀತದಲ್ಲಿ ತೊಡಗಿಸಿಕೊಂಡರೆ ವಿದ್ಯಾಭ್ಯಾಸ ಹೆಚ್ಚಿಸಲು ಸಾಧ್ಯ. ಜಾನಪದ ಸಂಗೀತವು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ಕೇಶವ ಕಾಮತ್ ಅವರು ಹೇಳಿದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಘಟಕದ ಅಧ್ಯಕ್ಷರಾದ ಎಚ್.ಟಿ.ಅನಿಲ್ ಅವರು ಮಾತನಾಡಿ ಕೊಡಗಿನ ಪ್ರಮುಖ ಜಾನಪದ ಸುಗ್ಗಿಹಬ್ಬವಾಗಿರುವ ಪುತ್ತರಿ ಹಿನ್ನಲೆಯಲ್ಲಿಯೇ ಈ ಕಾರ್ಯಕ್ರಮ ಆಯೋಜನೆ ಮೂಲಕ ಜಾನಪದ ಕಂಪನ್ನು ಹೆಚ್ಚು ಪಸರಿಸಿದಂತಾಗುತ್ತದೆ ಎಂದು ಶ್ಲಾಘಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳನ್ನು ಕಲಿಸುವ ಮೂಲಕ ಜಾನಪದ ಕಲೆಯ ಸಂರಕ್ಷಣೆಗೆ ಮುಂದಾಗಬೇಕು. ಜಾನಪದ ಕಲೆಗಳಿಗೆ ಸಂಬಂಧಿಸಿದಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿ, ಶಿಕ್ಷಕರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಕಲಾವಿದರಿಗೆ ಪ್ರೋತ್ಸಾಹ ನೀಡಿ ಎಂದು ಕರೆ ನೀಡಿದರು. ಮಡಿಕೇರಿ ಲಯನ್ಸ್ ಟ್ರಸ್ಟ್ ಅಧ್ಯಕ್ಷರಾದ ನವೀನ್ ಅಂಬೆಕಲ್ ಅವರು ಮಾತನಾಡಿ ಜಾನಪದ ಕಲೆಗಳನ್ನು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಬೆಳೆಸಲು ಮುಂದಾಗಬೇಕು ಎಂದು ಹೇಳಿದರು. ಬೆಂಗಳೂರು ಜೋಗಿಲ ಸಿದ್ದರಾಜು, ನಾಗರಾಜು ಅವರು ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಹಾಗೂ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಬಿ.ಜಿ.ಅನಂತಶಯನ, ಎಸ್.ಎಸ್.ಸಂಪತ್ ಕುಮಾರ್, ಜಾನಪದ ಕಲಾತಂಡಗಳು, ವಿದ್ಯಾರ್ಥಿಗಳು ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮುನೀರ್ ಅಹಮ್ಮದ್ ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಪರಿಷತ್ ಗೌರವ ಕಾರ್ಯದರ್ಶಿ ರೇವತಿ ರಮೇಶ್ ವಂದಿಸಿದರು.











