ಮಡಿಕೇರಿ ಡಿ.4 NEWS DESK : ದಲಿತ ಸಂಘಟನೆಗಳ ಹಲವು ವರ್ಷಗಳ ಬೇಡಿಕೆಯಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಮಡಿಕೇರಿ ನಗರದ ಸುದರ್ಶನ ವೃತ್ತದ ಸರಕಾರಿ ಜಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ಡಿ.5 ರಂದು ಭೂಮಿಪೂಜೆ ನಡೆಯಲಿದೆ. ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪನೆಯಾಗುತ್ತಿದ್ದು, ನಗರದ ಸುದರ್ಶನ ವೃತ್ತದ ಬಳಿಯ ಸರಕಾರಿ ಜಾಗವನ್ನು ಗುರುತಿಸಲಾಗಿದೆ. ಡಿ.5ರಂದು ಪ್ರತಿಮೆ ಸ್ಥಾಪನೆಗೆ ಭೂಮಿಪೂಜೆ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಜೆ.ಮೋಹನ್ ಮೌರ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮಾರಕದ ಬಳಿಯ ನಗರಸಭೆಯ ಉದ್ಯಾನವನದಲ್ಲಿ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ಕೊಡಗು ಜಿಲ್ಲಾಡಳಿತ ಮತ್ತು ಮಡಿಕೇರಿ ನಗರಸಭೆಯ ಸಹಯೋಗದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದರು. ಅಂದಾಜು 2 ರಿಂದ 3 ಸೆಂಟ್ಸ್ ಜಾಗದಲ್ಲಿ ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಉದ್ಯಾನವನ ನಿರ್ಮಾಣವಾಗಲಿದೆ. ಪ್ರತಿಮೆ ನಿರ್ಮಾಣಕ್ಕೆ ಜಿಲ್ಲೆಯ ಸುಮಾರು 37 ಸಂಘಟನೆಗಳು ಸಹಕರಿಸಿವೆ. ಕೊಡಗಿನ ಎಲ್ಲಾ ದಲಿತ ಸಂಘಟನೆಗಳ ನಾಯಕರು, ಅಹಿಂದ ಮುಖಂಡರುಗಳು, ಸಮಾನ ಮನಸ್ಕರ ವೇದಿಕೆ, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿ ಪರ ಚಿಂತಕರು ಹಾಗೂ ಅಂಬೇಡ್ಕರ್ ಅನುಯಾಯಿಗಳ ಸಹಕಾರದಿಂದ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಕಾರಣಕರ್ತರಾದ ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಜಿಲ್ಲಾಧಿಕಾರಿಗಳು, ಮಡಿಕೇರಿ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು ಹಾಗೂ ನಗರಸಭೆಯ ಎಲ್ಲಾ ಸದಸ್ಯರಿಗೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ಪ ಹಾನಗಲ್ಲು ಮಾತನಾಡಿ, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕೆನ್ನುವುದು ದಲಿತ ಸಂಘರ್ಷ ಸಮಿತಿಯ 45 ವರ್ಷಗಳ ಹಳೆಯ ಬೇಡಿಕೆಯಾಗಿದ್ದು, ಇದೀಗ ಅದು ಈಡೇರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಮಿತಿಯ ಗೌರವಾಧ್ಯಕ್ಷ ಹೆಚ್.ಎಲ್.ದಿವಾಕರ್ ಮಾತನಾಡಿ, ದಲಿತ ಸಂಘರ್ಷ ಸಮಿತಿಯ ಹಲವು ವರ್ಷಗಳ ಹೋರಾಟಕ್ಕೆ ಈಗ ಫಲ ದೊರೆತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಾಧ್ಯಮ ವಕ್ತಾರ ವಿನಯ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಹಾಗೂ ಖಜಾಂಚಿ ಪ್ರೇಮ ಕೃಷ್ಣಪ್ಪ ಉಪಸ್ಥಿತರಿದ್ದರು.











