ಮಡಿಕೇರಿ ಡಿ.4 NEWS DESK : ಶ್ರೀರಂಗಪಟ್ಟಣದಿಂದ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿ ವರೆಗೆ ನಾಲ್ಕು ಪಥದ ರಸ್ತೆ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬಸವನಹಳ್ಳಿಯಿಂದ ಸಂಪಾಜೆವರೆಗೆ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಿನಿಂದಲೇ ಸುಗಮ ಸಾರಿಗೆ ಸಂಚಾರಕ್ಕೆ ಅಗತ್ಯ ಮುನ್ನೆಚ್ಚರ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಅವರ ಸಭಾಂಗಣದಲ್ಲಿ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಶಾಲನಗರದ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿಯಿಂದ ಸಂಪಾಜೆ ವರೆಗೆ ರಸ್ತೆ ಸುರಕ್ಷತೆ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು. ಉಬ್ಬುಗಳ ನಿರ್ಮಾಣ, ಅಗತ್ಯವಿರುವ ಕಡೆಗಳಲ್ಲಿ ಜೀಬ್ರಾ ಕ್ರಾಸ್ ಬರೆಸುವುದು, ಉಬ್ಬುಗಳ ನಿರ್ಮಾಣ, ಬ್ಲಾಕ್ ಸ್ಪಾಟ್ ಗುರುತಿಸುವುದು, ತಿರುವುಗಳಲ್ಲಿ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಕುಶಾಲನಗರದಿಂದ ಸಂಪಾಜೆವರೆಗೆ ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸಬೇಕು. ಈ ಭಾಗದ ರಸ್ತೆಯಲ್ಲಿ ದೀಪ ಅಳವಡಿಸುವುದು. ರಸ್ತೆ ಬದಿ ಗಿಡಗಂಟೆಗಳನ್ನು ಕಡಿಯುವುದು, ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕ ಹಾಗೂ ಉಬ್ಬುಗಳ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಮಡಿಕೇರಿಯಿಂದ ಬೋಯಿಕೇರಿವರೆಗೆ ಒಂದು ರೀತಿ ಒತ್ತಡದ ರಸ್ತೆಯಾಗಿದ್ದು, ಈ ಭಾಗದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮತ್ತಷ್ಟು ನಿಗಾವಹಿಸಬೇಕು ಎಂದು ಹೇಳಿದರು. ಹೆದ್ದಾರಿಗಳಲ್ಲಿ ಸೈನ್ ಬೋರ್ಡ್ ಅಳವಡಿಸುವುದು, ಮೂರ್ನಾಡು ಗೋಣಿಕೊಪ್ಪದಲ್ಲಿ ವಾಹನ ನಿಲುಗಡೆಗೆ ಜಾಗ ಗುರುತಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಅವರು ಶ್ರೀರಂಗಪಟ್ಟಣದಿಂದ ಬಸವನಹಳ್ಳಿ ವರೆಗೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕುಶಾಲನಗರ ದಿಂದ ಸಂಪಾಜೆ ವರೆಗೆ ಹೆದ್ದಾರಿಯಲ್ಲಿ ಅಪಘಾತ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ರಸ್ತೆ ಕಾಮಗಾರಿ ಯೋಜನೆ ಸಂಬಂಧ ಡಿಪಿಆರ್ ಸಿದ್ದಪಡಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಗಮನಕ್ಕೆ ತರುವಂತಾಗಬೇಕು ಎಂದು ಸಲಹೆ ಮಾಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಅವರು ಮಾತನಾಡಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದರು. ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ನಾಯಕ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ, ಪೊಲೀಸ್ ಅಧಿಕಾರಿ ಮೇದಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತೀಶ(ವಿರಾಜಪೇಟೆ), ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳು ಇತರರು ಇದ್ದರು.











