ಮಡಿಕೇರಿ ಡಿ.5 NEWS DESK : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿ.7 ರಂದು ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬೊಟ್ಟಿಯತ್ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕೈಮುಡಿಕೆ ಪುತ್ತರಿ ಕೋಲ್ ಮಂದ್’ಗೆ ಶತ ಶತಮಾನಗಳ ಇತಿಹಾಸವಿದ್ದು, ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ಎಲ್ಲಾ ಗ್ರಾಮಗಳು ಒಂದೆಡೆ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪೊನ್ನಂಪೇಟೆ-ಅರ್ವತೋಕ್ಲುವಿನಿಂದ ಹಿಡಿದು ಹಾತೂರುವಿನವರೆಗೂ, ಹಾತೂರು-ಬಿಟ್ಟಂಗಾಲದಿಂದ ಹಿಡಿದು ವಿ ಬಾಡಿಗ, ಬಿ.ಶೆಟ್ಟಿಗೇರಿಯವರೆಗಿನ ಎಲ್ಲಾ ಗ್ರಾಮಗಳು ಕೈಮುಡಿಕೆ ವ್ಯಾಪ್ತಿಗೆ ಒಳಪಡುತ್ತದೆ. ಪ್ರತಿವರ್ಷ ಪುತ್ತರಿ ಕಳೆದು ಎರಡು ದಿವಸದಲ್ಲಿ ಇಲ್ಲಿ ಕೋಲ್ ಮಂದ್ ನಡೆಯುತ್ತಿದ್ದು, ಈ ಬಾರಿ ಡಿ.7 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದ್ದಾರೆ. ಈ ಬಾರಿ ಮುಖ್ಯ ಅತಿಥಿಗಳಾಗಿ ಹಿರಿಯ ಜಾನಪದ ತಜ್ಞ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಭಾಗವಹಿಸಲಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೂರು ನಾಡಿನವರು ಸೇರಿ ಮಂದ್ ಪುಡಿಪೊ ಕಾರ್ಯಕ್ರಮದ ಬಳಿಕ ಮೂರು ನಾಡಿನವರ ಸಾಮೂಹಿಕ ಪುತ್ತರಿ ಕೋಲಾಟ್ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ಜಿಲ್ಲಾ ಮಟ್ಟದಲ್ಲಿ ವಿವಿಧ ಪೈಪೋಟಿ ಕಾರ್ಯಕ್ರಮಗಳು ನಡೆಯಲಿದ್ದು ಆಸಕ್ತರು ಸ್ಥಳದಲ್ಲಿಯೇ ಪೈಪೋಟಿಗೆ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ, ಆದರೆ ಸ್ಪರ್ಧಿಗಳು ಬೆಳಿಗ್ಗೆ 10 ಗಂಟೆಯ ಒಳಗೆ ಸ್ಥಳದಲ್ಲಿರಬೇಕು ಎಂದು ಮಾಹಿತಿ ನೀಡಿದ್ದಾರೆ. ಪುತ್ತರಿ ಕೋಲಾಟ್, ಉಮ್ಮತಾಟ್ , ಬೊಳಕಾಟ್, ಕತ್ತಿಯಾಟ್, ದುಡಿಕೊಟ್ಟ್ ಪಾಟ್, ಪರೆಯಕಳಿ, ಕೊಡವ ಪಾಟ್ ಪೈಪೋಟಿ, ವಾಲಗತಾಟ್ ಸೇರಿದಂತೆ ಬುಡಕಟ್ಟು ಸಮುದಾಯದ ಚೀನಿ ದುಡಿ ನುಡಿಸುವ ಪೈಪೋಟಿ ಸೇರಿದಂತೆ ವಿವಿಧ ಪೈಪೋಟಿ ಕಾರ್ಯಕ್ರಮಗಳು ನಡೆಯಲಿದೆ. ನೆರೆದವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು ಹೆಚ್ಚಿನ ಮಾಹಿತಿಗೆ 9901262398, 94857 32532 ಅಥವಾ 9880967573 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.











