ಮಡಿಕೇರಿ ಡಿ.5 NEWS DESK : ಧಾನ್ಯಲಕ್ಷ್ಮಿಯನ್ನು ಸ್ವಾಗತಿಸುವ ಕೊಡಗಿನ ಸುಗ್ಗಿಯ ಹಬ್ಬ ‘ಪುತ್ತರಿ’ ಆಚರಣೆಯ ಮರುದಿನವಾದ ಇಂದು ‘ಪುತ್ತರಿ ಅರಮನೆ ಕೋಲ್’, ಜಾನಪದ ನೃತ್ಯ ಪ್ರಕಾರಗಳ ಪ್ರದರ್ಶನ ನಗರದ ಕೋಟೆಯಾವರಣದಲ್ಲಿ ನಡೆಯಿತು. ಕೊಡಗನ್ನಾಳಿದ ಹಾಲೇರಿ ವಂಶಸ್ಥರ ಆಡಳಿತಾವಧಿಯಲ್ಲಿ ಪುತ್ತರಿ ಹಬ್ಬಾಚರಣೆಯ ಸಂಭ್ರಮದೊಂದಿಗೆ ಈ ನೆಲದ ಸಂಸ್ಕøತಿಗೆ ಒತ್ತು ನೀಡಿ ನಡೆಯುತ್ತಿದ್ದ ‘ಪುತ್ತರಿ ಅರಮನೆ ಕೋಲ್’ ಕೋಲಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಧಾನ್ಯಲಕ್ಷ್ಮಿಯನ್ನು ಮನೆದುಂಬಿಸಿಕೊಳ್ಳುವ ಹುತ್ತರಿಯ ಸಂಭ್ರಮದ ಹಿನ್ನೆಲೆಯಲ್ಲೆ ಹಾಲೇರಿ ರಾಜವಂಶಸ್ಥ ಲಿಂಗರಾಜೇಂದ್ರನ ಆಡಳಿತದ ಅವಧಿಯಲ್ಲಿ ಕೋಟೆ ಆವರಣದಲ್ಲಿ ಹುತ್ತರಿಯ ಮರುದಿನ ನಾಡಿನ ಜನತೆಯ ಸಮ್ಮುಖದಲ್ಲಿ ಹುತ್ತರಿ ಕೋಲಾಟ್ ನಡೆಯುತ್ತಿತ್ತು. ರಾಜನ ಆಳ್ವಿಕೆಯ ಬಳಿಕ ಕಾಲ ಕ್ರಮೇಣ ಈ ಪದ್ಧತಿ ಸ್ಥಗಿತಗೊಂಡಿತ್ತು. ನಂತರದ ವರ್ಷಗಳಲ್ಲಿ, ರಾಜರ ಕಾಲದಲ್ಲಿ ಕೋಲಾಟ ನಡೆಸಿಕೊಡುತ್ತಿದ್ದ ‘ಪಾಂಡೀರ’ ಕುಟುಂಬಸ್ಥರ ಸಹಕಾರದೊಂದಿಗೆ ಕೋಟೆಯ ಆವರಣದಲ್ಲಿ ಪುತ್ತರಿ ಕೋಲಾಟವನ್ನು ನಡೆಸಲಾಗುತ್ತಿದೆ. ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಮಡಿಕೇರಿ ಕೊಡವ ಸಮಾಜ ಹಾಗೂ ಪಾಂಡೀರ ಕುಟುಂಬಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಪುತ್ತರಿ ಕೋಲಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಕೊಡಗಿನ ವಿಶಿಷ್ಟ ಸಂಸ್ಕøತಿ, ಪರಂಪರೆಯನ್ನು ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಪುತ್ತರಿ ಕೋಲ್ ಮಂದ್ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ಕೋಲಾಟ ಪ್ರದರ್ಶನಕ್ಕೂ ಮೊದಲು ಕೋಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪಾಂಡೀರ ಕುಟುಂಬಸ್ಥರು, ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಕೊಡವ ಸಮಾಜದ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪಾಂಡೀರ ಕುಟುಂಬಸ್ಥರು ಪ್ರಾರಂಭಿಕವಾಗಿ ನಡೆಸಿಕೊಟ್ಟ ಪುತ್ತರಿ ಕೋಲಾಟ, ಬೊಳಕಾಟ್, ಪಾಂಡೀರ ಕುಟುಂಬದ ಮಹಿಳಾ ಸದಸ್ಯರಿಂದ ನಡೆದ ಉಮ್ಮತ್ತಾಟ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೆಲ್ಲರು ವಿವಿಧ ನೃತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮಡಿಕೇರಿ ಕೊಡವ ಸಮಾಜದ ತಂಡಗಳಿಂದ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್ ಮತ್ತು ಪರೆಯಕಳಿ ಪದರ್ಶನಗೊಳ್ಳುವ ಮೂಲಕ ಕೊಡಗಿನ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎ.ಸಿ.ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಪ್ರಮುಖರಾದ ನಾಪಂಡ ರವಿ ಕಾಳಪ್ಪ, ಪಾಂಡೀರ ಕುಟುಂಬದ ತಕ್ಕ ಮುಖ್ಯಸ್ಥರಾದ ಪಾಂಡೀರ ಮಣಿ ಕಾಳಪ್ಪ, ಪಂಡೀರ ರವಿ ಕರುಂಬಯ್ಯ, ಪಾಂಡೀರ ಕಟುಂಬದ ಅಧ್ಯಕ್ಷ ಪಾಂಡೀರ ಅಯ್ಯಣ್ಣ, ಸದಸ್ಯರಾದ ಪಾಂಡೀರ ಮುತ್ತಣ್ಣ, ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.












