ವಿರಾಜಪೇಟೆ ಡಿ.5 NEWS DESK : ಬೇಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪುತ್ತರಿ (ಹುತ್ತರಿ) ಹಬ್ಬವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಅರ್ಚಕರು ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ನಾಗ ದೇವರು ಹಾಗೂ ಶ್ರೀ ವನದುರ್ಗೆ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಿದರು. ನಂತರ ನೆರೆಕಟ್ಟಿ, ಸಮೀಪದ ಮಕ್ಕಿಯ ಬಿ.ಆರ್.ಶ್ರೀನಿವಾಸ್ ಅವರ ಗದ್ದೆಗೆ ತೆರಳಿ ಧಾನ್ಯಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಿ, ಹಾಲಿನ ಅಭಿಷೇಕವನ್ನು ಮಾಡಿ ಆರತಿಯನ್ನು ಬೆಳಗಿ ಶ್ರೀ ಇಗ್ಗುತ್ತಪ್ಪ, ಕಾವೇರಮ್ಮೆಯನ್ನು ಪ್ರಾರ್ಥಿಸುವ ಮೂಲಕ ಕದಿರನ್ನು ತೆಗೆದರು. ನೆರೆದಿದ್ದ ಭಕ್ತಾದಿಗಳು ಪೊಲಿ ಪೊಲಿಯೇ ದೇವಾ ಎಂದು ಕೂಗುತ್ತ ಧಾನ್ಯಲಕ್ಷ್ಮಿ ಗೆ ನಮಿಸಿದರು. ದೇವಸ್ಥಾನಕ್ಕೆ ತೆರಳಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಪೂಜೆಯನ್ನು ಸಲ್ಲಿಸಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತಾದಿಗಳಿಗೆ ಅರ್ಚಕರು ಕದಿರನ್ನು ಹಾಗೂ ಪ್ರಸಾದವನ್ನು ವಿತರಿಸಿದರು. ಸಿಡಿ ಮದ್ದನ್ನು ಸಿಡಿಸಿ ಸಂಭ್ರಮಿಸಿದರು. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ವಾಮನಮೂರ್ತಿ ಭಟ್ ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಪಿ.ಸಂತೋಷ್, ಉಪಾಧ್ಯಕ್ಷರುಗಳಾದ ಬಿ.ಜಿ.ನಂದ, ಬಿ.ಎಂ.ಶೈಲೇಶ್, ಕಾರ್ಯದರ್ಶಿ ಬಿ.ಎನ್.ಶಾಂತಿಭೂಷಣ್, ಖಜಾಂಚಿ ಜ್ಯೋತಿ ಸರ್ವ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.











