ವಿರಾಜಪೇಟೆ ಡಿ.9 NEWS DESK : ಕಾನೂರು ವಲಯದ ಕೋತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ಹೈನುಗಾರಿಕೆ ಮಾಹಿತಿ ಕಾರ್ಯಕ್ರಮವು ಸಮಗ್ರ ಕೃಷಿಕರಾದ ಕೃಷ್ಣ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಪಶು ವೈದ್ಯಧಿಕಾರಿಗಳಾದ ಡಾ.ಚಂದ್ರಶೇಖರ್ ಉದ್ಘಾಟಿಸಿ, ಮಾತನಾಡಿ ಹೈನುಗಾರಿಕೆಯು ಲಾಭದಾಯಕವಾಗಿದ್ದು, ಹಟ್ಟಿ ರಚನೆ ವಿಧಾನಗಳು, ಹಸುಗಳ ಆಯ್ಕೆ, ಕರುಗಳ ಪಾಲನೆ ಹಸುಗಳಿಗೆ ಸಂಪೂರ್ಣ ಆಹಾರ ನೀಡುವ ಬಗ್ಗೆ, ಹಸುಗಳಿಗೆ ಬರುವ ಸಾಂಕ್ರಾಮಿಕ ಕಾಯಿಲೆಗಳು ಮತ್ತು ಸಿಗುವ ಲಸಿಕೆ ಗಳ ಬಗ್ಗೆ ಮತ್ತು ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು. ಹೈನುಗಾರಿಕೆಯು ಸ್ವಯಂ ಉದ್ಯೋಗಕ್ಕೆ ಒಂದು ಉತ್ತಮ ಅವಕಾಶವಾಗಿದ್ದು, ಇದರಿಂದ ಜನರು ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು ಎಂದು ಹೇಳಿದರು. ಕೃಷಿ ಮೇಲ್ವಿಚಾರಕರಾದ ವಸಂತ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಹೈನುಗಾರಿಕೆಗೆ ಸಿಗುವ ತರಬೇತಿ, ಪ್ರಗತಿ ನಿಧಿ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾನೂರು ಪಶು ಸಖಿಯಾದ ಮೋನಿಕಾ, ಸೇವಾಪ್ರತಿನಿಧಿಗಳು, ಕಾವೇರಿ ಸಂಘದ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.










