ಮಡಿಕೇರಿ ಡಿ.11 NEWS DESK : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕುರಿತು ಅವಹೇಳನ ವಿಡಿಯೋ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಟಿಪ್ಪು ಜಯಂತಿ ಆಚರಣೆ ಪುನರಾರಂಭ ಕುರಿತು ಸರಕಾರಕ್ಕೆ ಪ್ರಸ್ತಾಪಿಸಿರುವುದನ್ನು ವಿರೋಧಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾಗಾಂಧಿ ವೃತ್ತ (ಚೌಕಿ)ದಲ್ಲಿ ಜಮಾಯಿಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಕೈಗೊಳ್ಳಬೇಕು ಮತ್ತು ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಸಭೆ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಅರುಣ್ ಕುಮಾರ್, ಕಿಶೋರ್ ಕುಮಾರ್, ಮನುಮುತ್ತಪ್ಪ, ಕೆ.ಎಸ್.ರಮೇಶ್, ಅರುಣ್ ಶೆಟ್ಟಿ, ಪಿ.ಎಂ.ರವಿ ಸೇರಿದಂತೆ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










