ಮಡಿಕೇರಿ ಡಿ.19 NEWS DESK : ‘ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ’ ಎನ್ನುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಧ್ಯೇಯ ವಾಕ್ಯದ ಸಾಕಾರವಾಗಬೇಕಿದ್ದಲ್ಲಿ, ನಮ್ಮಲ್ಲಿ ನಾವು ಪರಿವರ್ತನೆಯನ್ನು ಕಾಣುವುದು ಅವಶ್ಯ. ಇಂತಹ ಪರಿವರ್ತನೆಗಾಗಿ ‘ಅಧ್ಯಯನ’ಕ್ಕೆ ಮಹತ್ವವನ್ನು ನೀಡಬೇಕೆಂದು ಖ್ಯಾತ ವಾಗ್ಮಿ ಹಾಗೂ ಮೀಡಿಯಾ ಮಾಸ್ಟರ್ ಯೂ ಟ್ಯೂಬ್ ಸಂಸ್ಥಾಪಕ ಎಂ.ಎಸ್.ರಾಘವೇಂದ್ರ ಯುವ ಸಮೂಹಕ್ಕೆ ಕರೆ ನೀಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45ನೇ ದಕ್ಷಿಣ ಪ್ರಾಂತ ಸಮ್ಮೇಳನದ ಕೊನೆಯ ಹಾಗೂ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ಬಂದ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮಲ್ಲಿ ‘ಪ್ರಶ್ನಿಸುವ’ ಮನೋಭಾವವನ್ನು ಮರೆಸಿ, ಗುಲಾಮಗಿರಿತನವನ್ನಷ್ಟೆ ತುಂಬಿತು. ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ನಾವು ಅಂದಿನ ಶಿಕ್ಷಣ ಪದ್ಧತಿಗಳಡಿಯಲ್ಲೇ ಸಾಗುತ್ತಿದ್ದೇವೆ ಎಂದು ವಿಷಾದಿಸಿದರು. ಸ್ವಾತಂತ್ರ್ಯ ಬಂದ ಅವಧಿಯಲ್ಲಿಯೂ ಗುಲಾಮಗಿರಿತನದ ಮನೋಭಾವವೆ ನಮ್ಮನ್ನು ಆವರಿಸಿತ್ತು. ಇವುಗಳ ನಡುವೆ ಕೆಲವರು ಯುವ ಸಮೂಹದಲ್ಲಿ ರಾಷ್ಟ್ರಾಭಿಮಾನವನ್ನು, ಸ್ವಾಭಿಮಾನವನ್ನು ತುಂಬುವ ಮೂಲಕ, ವ್ಯಕ್ತಿಯಿಂದ ರಾಷ್ಟ್ರ ನಿರ್ಮಾಣ ಎನ್ನುವ ಚಿಂತನೆಗಳನ್ನು ಯುವ ಸಮೂಹದಲ್ಲಿ ತುಂಬುವ ಪ್ರಯತ್ನಗಳಿಗೆ ಮುಂದಾದರು. ಅದರ ಫಲಸ್ವರೂಪವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಸ್ತಿತ್ವಕ್ಕೆ ಬಂದಿತೆಂದು ತಿಳಿಸಿದರು. ವ್ಯಕ್ತಿಯಿಂದ ರಾಷ್ಟ್ರ ನಿರ್ಮಾಣವೆಂದರೆ ನಿರಂತರವಾದ ಅಧ್ಯಯನದೊಂದಿಗೆ ಜ್ಞಾನ ಸಂಪತ್ತನ್ನು ತಮ್ಮದಾಗಿಸಿಕೊಳ್ಳುವುದು ಹಾಗೂ ಪರಿವರ್ತನೆಯತ್ತ ಮುಖ ಮಾಡುವುದು. ಇದರೊಂದಿಗೆ ತಮ್ಮ ಇತಿ ಮಿತಿಗಳಲ್ಲಿ, ಊರು, ಗ್ರಾಮ, ಬಡಾವಣೆಗಳಲ್ಲಿ ರಾಷ್ಟ್ರ ಹಿತಕ್ಕೆ ಪೂರಕವಾದ ಚಿಂತನೆಗಳನ್ನು ದಿನಕ್ಕೆ ಕನಿಷ್ಟ ಅರ್ಧ ಗಂಟೆಯ ಕಾಲ ಜನರಿಗೆ ತಲುಪಿಸುವ ಕಾರ್ಯದಲ್ಲಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ನಿರಂತರ ಪ್ರಕ್ರಿಯೆಯಾದಾಗ ರಾಷ್ಟ್ರ ನಿರ್ಮಾಣದ ಕನಸು ನನಸಾಗುತ್ತದೆ ಎಂದು ರಾಘವೇಂದ್ರ ಹೇಳಿದರು. ಪುಟ್ಟ ರಾಷ್ಟ್ರ ಇಸ್ರೇಲ್‍ನ್ನು ಕಟ್ಟಿ ಬೆಳೆÉಸುವಲ್ಲಿ ಮಹತ್ತರ ಪಾತ್ರ ವಹಿಸಿದ ಅಲ್ಲಿನ ಪ್ರಥಮ ಪ್ರಧಾನಿ ಬೆಂಗುರಿಯನ್ ಅವರು, ದೇಶವನ್ನು ಕಟ್ಟಿ ಅಧಿಕಾರ ಬಿಟ್ಟು ಗ್ರಾಮೀಣ ಭಾಗದಲ್ಲಿ ನೆಲೆಸಿದ್ದರು. ಬಳಿಕ ದೇಶಕ್ಕೆ ಅವರ ಅಗತ್ಯವಿದ್ದಾಗ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಸ್ವಹಿತಾಸಕ್ತಿಗಳನ್ನು ಮರೆತು ರಾಷ್ಟ್ರ ಕಟ್ಟುವ ಅಂತಹ ನಾಯಕರು ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಭಾರತಲ್ಲಿ ಕಂಡು ಬರಲೇ ಇಲ್ಲ. ಇಲ್ಲಿನ ಯಾವುದೇ ರಾಜಕಾರಣಿ ಅಧಿಕಾರ ಬಿಟ್ಟು ಹೊರ ಬರುವ ಮನಸ್ಥಿತಿಯನ್ನೆ ಹೊಂದಿಲ್ಲ. ‘ವ್ಯಕ್ತಿಯಿಂದ ರಾಷ್ಟ್ರ ನಿರ್ಮಾಣ’ ಎನ್ನುವ ಚಿಂತನೆಯನ್ನು ನಮ್ಮಲ್ಲಿ ತುಂಬದಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ಅಭಿಪ್ರಾಯಪಟ್ಟರು. *ಯುವ ಪುರಸ್ಕಾರ ಪ್ರದಾನ* ಬೆಂಗಳೂರಿನ ನಿವಾಸಿ, ಮಹಾನಗರಿಯ ಮರಗಳ ಸಂರಕ್ಷಣೆಗಾಗಿ ‘ಬೆಂಗಳೂರು ಹುಡುಗರು’ ಸಂಸ್ಥೆಯನ್ನು ಕಟ್ಟಿ ಶ್ರಮಿಸುತ್ತಿರುವ ಮನೋಜ್ ನಂದೀಶಪ್ಪ ಅವರಿಗೆ ಎಬಿವಿಪಿಯಿಂದ ಯುವ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಜ್ ನಂದೀಶಪ್ಪ ಅವರು ಬೆಂಗಳೂರಿನ ಮರಗಳ ಸಂರಕ್ಷಣೆಗಾಗಿ ‘ಮೊಳೆ ಮುಕ್ತ ಮರ’, ‘ಬಂಧನ ಮುಕ್ತ ಬೆಂಗಳೂರು’ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆ ಮೂಲಕ ಮಹಾನಗರಿಯಲ್ಲಿ ಇರುವ ಮರಗಳ ಸಂರಕ್ಷಣೆ ನಮ್ಮ ಚಿಂತನೆಯಾಗಿದೆ. ಯುವಸಮೂಹ ಸಣ್ಣಪುಟ್ಟ ವಿಚಾರಗಳಿಗೆ ಬದುಕನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾದಿಸಿ, ಬದುಕನ್ನು ಧೈರ್ಯದಿಂದ ಎದುರಿಸಬೇಕು. ಧೈರ್ಯವಿದ್ದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದರು. ಎಬಿವಿಪಿ ತುಮಕೂರು ವಿಭಾಗ ಪ್ರಮುಖ್ ಅಜಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎಪ್ಪತೈದು ವರ್ಷಗಳಿಂದ ಎಬಿವಿಪಿ ಸಂಘಟನೆ ರಾಷ್ಟ್ರ ವ್ಯಾಪಿ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ತನ್ನಪರಿಕಲ್ಪನೆಯಡಿ ವಿದ್ಯಾರ್ಥಿ ಸ್ನೇಹಿ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಸಮಾಜದ ವಿವಿಧ ಆಯಾಮಗಳ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಎಬಿವಿಪಿ ದಕ್ಷಿಣ ಪ್ರಾಂತದ ಅಧ್ಯಕ್ಷ ಡಾ. ರವಿ ಮಂಡ್ಯ ಹಾಗೂ ದಕ್ಷಿಣ ಪ್ರಾಂತದ ಕಾರ್ಯದರ್ಶಿ ಗೋಪಿ ಅರವಿಂದ್ ಉಪಸ್ಥಿತರಿದ್ದರು.










