ಮಡಿಕೇರಿ ಡಿ.20 NEWS DESK : ಬೇಸಿಗೆ ಅವಧಿಯಲ್ಲಿ ನವೋದಯ ಶಾಲೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಈ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್‍ಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಸೂಚಿಸಿದ್ದಾರೆ. ನಗರದ ಜಿ.ಪಂ.ಸಿಇಒ ಅವರ ಕಚೇರಿಯಲ್ಲಿ ಶುಕ್ರವಾರ ನಡೆದ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆಬ್ರವರಿಯಿಂದಲೇ ನವೋದಯ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬನಗೊಳ್ಳುವುದರಿಂದ ಪರೀಕ್ಷೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಕುಡಿಯುವ ನೀರು ಪೂರೈಕೆ ಸಂಬಂಧ ಎಚ್ಚರವಹಿಸುವಂತೆ ಸಿಇಒ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ಭಾಸ್ಕರ್ ಅವರು ಕೂಟುಹೊಳೆಯಿಂದ ಪೂರೈಕೆಯಾಗುವ ಮಾರ್ಗದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನವೋದಯ ಶಾಲೆಗೂ ಕುಡಿಯುವ ನೀರು ಪೂರೈಸುವಂತೆ ನಗರಸಭೆಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ ಅವರು ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುವುದರ ಜೊತೆಗೆ ನಗರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚಿಸಿ ಮುಂದಿನ ಕ್ರಮವಹಿಸಬಹುದಾಗಿದೆ ಎಂದು ಅವರು ಸಲಹೆ ಮಾಡಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ, ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ನವೋದಯ ಶಾಲೆಯ ಪ್ರಾಂಶುಪಾಲರಾದ ಸಿ.ವಿ.ಪ್ರಮೀಳಾ ಅವರು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಕುಡಿಯುವ ನೀರು ಪೂರೈಕೆಗೆ ಸಹಕರಿಸಬೇಕಾಗಿ ಕೋರಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ಭಾಸ್ಕರ್ ಅವರು ಮಾತನಾಡಿ ಜಿಲ್ಲೆಯ 457 ಜನವಸತಿ ಪ್ರದೇಶದಲ್ಲಿ ಜೆಜೆಎಂ ಯೋಜನೆಯಡಿ ಕುಡಿಯುವ ನೀರು ಪೂರೈಸಲು ಮುಂದಾಗಲಾಗಿದೆ. ಇದರಲ್ಲಿ 352 ಕಾಮಗಾರಿ ಪೂರ್ಣಗೊಂಡಿದ್ದು, 179 ಜನವಸತಿ ಪ್ರದೇಶದಲ್ಲಿನ ಕಾಮಗಾರಿಯನ್ನು ಗ್ರಾಮ ಪಂಚಾಯತ್‍ಗೆ ಈಗಾಗಲೇ ಪ್ರಯೋಗಿಕವಾಗಿ ಚಾಲನೆ ನೀಡಿ ಹಸ್ತಾಂತರಿಸಲಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.’ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಂಗನವಾಡಿ, ಶಾಲಾ ಕಾಲೇಜುಗಳು, ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಜಲಜೀವನ್ ಮಿಷನ್ ಯೋಜನೆ ತಲುಪಬೇಕು. ಆ ನಿಟ್ಟಿನಲ್ಲಿ ಜಲಜೀವನ್ ಯೋಜನೆಯಡಿ ‘ನಲ್ಲಿ ನೀರು’ ಸಂಪರ್ಕ ಹೊಂದಬೇಕು ಎಂದು ಜಿ.ಪಂ.ಸಿಇಒ ಅವರು ಹೇಳಿದರು. ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚಿಸಿದರು. ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಿದ್ದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್ ಅವರ ಗಮನಕ್ಕೆ ತರುವಂತಾಗಬೇಕು ಎಂದು ಆನಂದ್ ಪ್ರಕಾಶ್ ಮೀನಾ ಅವರು ನಿರ್ದೇಶನ ನೀಡಿದರು. ಜಲಜೀವನ್ ಮಿಷನ್ ಯೋಜನಾ ಕಾಮಗಾರಿ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿ.ಪಂ.ಸಿಇಒ ಅವರು ಬಾಕಿ ಇರುವ ಕಾಮಗಾರಿಗಳನ್ನು ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಮಡಿಕೇರಿ ತಾಲ್ಲೂಕಿನ 9 ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಇದ್ದು, ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು ಅವರು ಹೇಳಿದರು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ಅಳವಡಿಸಿ ಒ ಮತ್ತು ಎಂ ಹಾಗೂ ನೀರಿನ ಆಯವ್ಯಯ ಸಿದ್ದಪಡಿಸಿ ಕೇಂದ್ರ ಕಚೇರಿಗೆ ಸಲ್ಲಿಸುವುದು. ಜೊತೆಗೆ ನೀರು ಮತ್ತು ನೈರ್ಮಲ್ಯ(ವಿಡಬ್ಲ್ಯುಎಸ್‍ಸಿ) ಬ್ಯಾಂಕ್ ಖಾತೆಗೆ ನೀರಿನ ಕರ ಜಮೆ ಮಾಡುವುದು ಹಾಗೂ ಫಲಾನುಭವಿಗಳ ಆಧಾರ್ ಕಾರ್ಡ್ ನಮೂದಿಸುವಂತೆ ಜಿ.ಪಂ.ಸಿಇಒ ಅವರು ಸಲಹೆ ಮಾಡಿದರು.ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಗ್ರಾ.ಪಂ.ವ್ಯಾಪ್ತಿಗಳಲ್ಲಿ ಸ್ವಚ್ಚತೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ, ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವುದು ಮತ್ತಿತರ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನಕುಮಾರ್, ಡಿಪಿಎಂ ಪುಟ್ಟಸ್ವಾಮಿ, ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್‍ಗಳು, ಕಾಮಗಾರಿ ಗುಣಮಟ್ಟ ತಪಾಸಣಾ ಸಂಸ್ಥೆಯ ಎಂಜಿನಿಯರ್‍ಗಳು ಇತರರು ಇದ್ದರು.











