ನಾಪೋಕ್ಲು ಡಿ.22 NEWS DESK : ಮೈಸೂರಿನ ಹೂಟಗಳ್ಳಿ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ 11ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪೊನ್ನಚ್ಚನ ಪಿ.ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಮಹಾಸಭೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜೇಶ್ ತೇನನ ಮತ್ತು ದೇವಜನ ಗೀತಾ ಮೊಂಟಡ್ಕ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷರಾದ ಬೆಪ್ಪುರನ ಲವ, ಕಾರ್ಯದರ್ಶಿ ಮುಕ್ಕಾಟಿ ಅರುಣ, ಸಹ ಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಜಾಂಚಿ ಎಡಿಕೇರಿ ಪೂಣಚ್ಚ, ಸಲಹಾ ಸೂಚಕರಾಗಿ ನಡುಮನೆ ಚಂಗಪ್ಪ ಮತ್ತು ಚೆಟ್ಟಿಮಾಡ ಜನಾರ್ಧನ, ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಸಾಧಕರಾದ ಕುಯ್ಯಮುಡಿ ಗೀತಾ ಹಾಗೂ ಸಂಘದ ಹಿರಿಯ ನಾಗರಿಕರಾದ ದಾಯನ ಬಾಲಕೃಷ್ಣ ಮತ್ತು ನಾಟೋಳನ ಭವಾನಿ ಮಾಚಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಂಘದ ಶ್ರೇಯೋಭಿವೃದ್ಧಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು. ನಂತರ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.
ವರದಿ : ದುಗ್ಗಳ ಸದಾನಂದ.











