ಸುಂಟಿಕೊಪ್ಪ ಡಿ.22 NEWS DESK : ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ ಗ್ರಾಮದವರಾದ ನಿವೃತ್ತ ಲೆಪ್ಟಿನೆಂಟ್ ಜನರಲ್ ಡಾ. ಬಿ.ಎನ್.ಬಿ.ಎಂ.ಪ್ರಸಾದ್ ಎಸ್‍ಎಂವಿಎಸ್‍ಎಂ ಪಿಹೆಚ್‍ಎಸ್ ಅವರಿಗೆ ಥೋರಾಸಿಕ್ ಎಂಡೋ ಸ್ಕೋಪಿ ಸೊಸೈಟಿ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ 2025 ನೀಡಿ ಗೌರವಿಸಲಾಗಿದೆ. ಲೆಪ್ಟಿನೆಂಟ್ ಜನರಲ್ ಡಾ.ಬಿ.ಎನ್.ಬಿ.ಎಂ.ಪ್ರಸಾದ್ ಎಸ್‍ಎಂವಿಎಸ್‍ಎಂ ಪಿಎಚ್‍ಎಸ್ ತಮ್ಮ ಸೇನಾ ಸೇವಾಧಿಯಲ್ಲಿ ಅತ್ಯುತ್ತಮ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದು, ಈ ಪೈಕಿ ಕಾರ್ಗಿಲ್ ಸಮರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಸೇನಾ ಮೆಡಲ್ ಶೌರ್ಯ ಪ್ರಶಸ್ತಿಯನ್ನು ಪಡೆದಿರುವುದು ಉಲ್ಲೇಖಾರ್ಹ. ಡಾ. ಪ್ರಸಾದ್ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರ ವೈಧ್ಯರಾಗಿ ಸರಿ ಸುಮಾರು 1 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಸೇನಾ ಪಡೆಯ ವೈದಕೀಯ ವಿಭಾಗದ ಮಹಾ ನಿರ್ದೇಶಕರಾಗಿದ್ದಾಗ ಅಂದಿನ ರಾಷ್ಟ್ರಪತಿ ಭಾರತ ರತ್ನ ಪ್ರಣಬ್‍ಮುಖರ್ಜಿಯವರ ಗೌರವ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಗುರುತಿಸಿ ಭಾರತೀಯ ಸೇನಾ ಪಡೆಯ ವೈದಕೀಯ ವಿಭಾಗದ ಮಹಾ ನಿರ್ದೇಶಕಿ ವೈಸ್ ಎಡ್ಮಿರಲ್ ಆರತಿ ಸರಿನ್ ಅವರು ಇತ್ತೀಚೆಗೆ ದೆಹಲಿಯಲ್ಲಿರುವ ಪ್ರತಿಷ್ಠಿತ ಸೇನಾ ಆರ್ ಆರ್ ಆಸ್ಪತ್ರೆಯಲ್ಲಿ ನಡೆದ ಹೃದಯಾಸ್ಪರ್ಶಿ ಸಮಾರಂಭದಲ್ಲಿ ಡಾ. ಬಿ.ಎನ್.ಬಿ.ಎಂ.ಪ್ರಸಾದ್ ಅವರನ್ನು ಆತ್ಮೀಯವಾಗಿ ಗೌರವಿಸಿದ್ದಾರೆ.











