

ಮಡಿಕೇರಿ ಡಿ.25 NEWS DESK : ಏಸು ಕ್ರಿಸ್ತ ಜನನದ ಸಂಕೇತವಾದ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಿದರು. ವಿವಿಧ ಚರ್ಚ್‍ಗಳಲ್ಲಿ ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಏಸು ಧರೆಗಿಳಿದನೆಂದು ಗೋದಲಿಯಲ್ಲಿ ಬಾಲಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯನ್ನು ಮೆರೆದರು. ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಪೂಜಿಸಲಾಯಿತು. ಧರ್ಮಗುರು ಜಾರ್ಜ್ ದೀಪಕ್ ಪೂಜೆ ಸಲ್ಲಿಸಿ, ಏಸುವಿನ ಸಂದೇಶವನ್ನು ಸಾರಿದರು. ಸಂತ ಮೈಕಲರ ಸಂಸ್ಥೆಯ ಪ್ರತಿನಿಧಿ ಸಂಜಯ್ ಹಾಗೂ ಪ್ರಮುಖರು ಇದ್ದರು.









