ಮಡಿಕೇರಿ ಡಿ.26 NEWS DESK : ರಸ್ತೆ ದುರಸ್ತಿಗೆ ಆಗ್ರಹಿಸಿ ಮರಗೋಡು ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಮರಗೋಡು ಮುಖ್ಯರಸ್ತೆಯಲ್ಲಿ ಜಮಾಯಿಸಿದ ಸಂಘದ ಪ್ರಮುಖರು ಹಾಗೂ ಗ್ರಾಮಸ್ಥರು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ರಸ್ತೆ ತಡೆದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ಹಿನ್ನೆಲೆ ಗ್ರಾಮದಲ್ಲಿನ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ವ್ಯಾಪಾರಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದರು. ಮರಗೋಡು, ಹೊಸ್ಕೇರಿ, ಕಟ್ಟೆಮಾಡು, ಅರೆಕಾಡು ಮತ್ತು ಹುಲಿತಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದೆ. ಗುಂಡಿಮಯ ರಸ್ತೆಯಿಂದಾಗಿ ವಾಹನಗಳ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಕಳಪೆ ರಸ್ತೆಯಿಂದಾಗಿ ಕೆಎಸ್‍ಆರ್‍ಟಿಸಿ ಬಸ್ಸುಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿವೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಸಾಗಿಸಲು ಹರಸಾಹಸ ಪಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಎರಡು ಬಾರೀ ನಾಮಕಾವಸ್ಥೆಗೆ ರಸ್ತೆ ದುರಸ್ತಿಗೆ ಭೂಮಿ ಪೂಜೆ ನೆರವೇರಿಸಿ ಇಲ್ಲಿಯವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಇದರ ಬಗ್ಗೆ ಹಲವು ಭಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸುವ ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಡಿಕೇರಿ ಡಿವೈಎಸ್‍ಪಿ ಸೂರಜ್ ಶಾಂತಿಯುತ ಪ್ರತಿಭಟನೆಗೆ ಸೂಚನೆ ನೀಡಿದರು. ನಂತರ ಲೋಕೋಪಯೋಗಿ ಇಲಾಖೆ (PWD) ಜೂನಿಯರ್ ಎಂಜಿನಿಯರ್ ಗಿರೀಶ್ ಅವರನ್ನು ಗ್ರಾಮಸ್ಥರು ತರಾಟಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಗಿರೀಶ್ ಮುಂದಿನ 15 ದಿನಗಳೊಳಗೆ 900 ಮೀಟರ್ ರಸ್ತೆ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು ಹಾಗೂ ಏಪ್ರಿಲ್ ಅಂತ್ಯದೊಳಗೆ ಉಳಿದ ಐದು ಕಿಲೋಮೀಟರ್ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಶರತ್ ಪರಿಚನ ಹಾಗೂ ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ನಂದಕುಮರ್ ಮಾತನಾಡಿ, ಅಧಿಕಾರಿಗಳು ನೀಡಿದ ಭರವಸೆ ಈ ಬಾರಿ ಕೇವಲ ಮಾತಾಗದೆ, ತಕ್ಷಣ ಕಾರ್ಯರೂಪಕ್ಕೆ ಬರಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.












