
ಮಡಿಕೇರಿ ಡಿ.27 NEWS DESK : ಮಡಿಕೇರಿಯ ಕೊಡಗು ವಿದ್ಯಾಲಯ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು 5ನೇ ತರಗತಿಯ ಮಕ್ಕಳು ಉತ್ಸಾಹದಿಂದ ನಡೆಸಿಕೊಟ್ಟರು. ಪ್ರಾರ್ಥನೆಯೊಂದಿಗೆ ಪ್ರಾಂಶುಪಾಲರಾದ ಸುಮಿತ್ರ ಕೆ.ಎಸ್., ಆಡಳಿತ ನಿರ್ವಹಣಾ ಅಧಿಕಾರಿ ರವಿ ಪಿ., ಕೋ-ಆರ್ಡಿನೇಟರ್ ಸುಮಂತ್ ಹಾಗೂ ಶಿಕ್ಷಕರು ಕ್ಯಾಂಡಲ್ ಹಚ್ಚುವ ಮೂಲಕ ಕ್ರಿಸ್ಮಸ್ ಸಂದೇಶವನ್ನು ಸಾರಿದರು. ಮಕ್ಕಳಿಂದ ಮನಮೋಹಕ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಫ್ರೀ ಸ್ಟೈಲ್ ಡಾನ್ಸ್ ಅನ್ನು ಮಕ್ಕಳು ಕೊರಿಯೋಗ್ರಾಫರ್ ಅಭಿಷೇಕ್ ಮತ್ತು ಅವರ ತಂಡದ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಸುದೀಪ್ತ ಕ್ರಿಸ್ಮಸ್ ದಿನದ ಮಹತ್ವದ ಬಗ್ಗೆ ಮಾತನಾಡಿ, ಯೇಸು ಕ್ರಿಸ್ತರ ಜನನವು ಪ್ರೀತಿ, ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು. ಕ್ರಿಸ್ಮಸ್ ಹಬ್ಬದ ಮಹತ್ವವನ್ನು ಸಾರುವಂತೆ ಮಕ್ಕಳಿಂದ ಯೇಸು ವಿನ ಜನನದ ಕಥೆಯನ್ನು ಆಧರಿಸಿದ ನಾಟಕ ಪ್ರದರ್ಶನ ನಡೆಯಿತು. ಕ್ರಿಸ್ಮಸ್ ಹಾಡುಗಳನ್ನು ಹಾಡುವ ಮೂಲಕ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಾಯಿತು. ಅಮೃತ , ಪವನ್ ನಿರ್ವಹಿಸಿದರು.









