ಮಡಿಕೇರಿ NEWS DESK ಡಿ.28 : ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಡೆ ತೆಗೆಯುವುದು, ನಿರ್ಮಲ್ಯ ಪೂಜೆ, ಗಣಪತಿ ಹೋಮ, ಅಷ್ಟಾಭಿಷೇಕ ಸೇವೆ, ತುಳಸಿ ಸಹಸ್ರನಾಮಾರ್ಚನೆ, ಮಹಾಪೂಜೆ, ಪಾಲಕೊಂಬು ಪ್ರತಿಷ್ಠಾಪನೆ ಹಾಗೂ ತಾಯಂಬಕಂ (ಚಂಡೆಸೇವೆ) ನಡೆಯಿತು. ಅಲಂಕೃತ ಮಂಟಪದಲ್ಲಿ ಚಂಡೆ ಮೇಳದೊಂದಿಗೆ ನಗರದ ಅಶ್ವಿನಿ ಗಣಪತಿ ದೇವಾಯಲಯದಿಂದ ಮುಖ್ಯಬೀದಿಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿ ಮತ್ತು ಪಾಲಕೊಂಬು ಮೆರವಣಿಗೆ ಸಾಗಿತು. ನಂತರ ದೀಪಾರಾಧನೆ, ಅಲಂಕಾರ ಪೂಜೆ, ಪಡಿ ರಂಗಪೂಜೆ, ದುರ್ಗಾಪೂಜೆ ಹಾಗೂ ಸುಬ್ರಹ್ಮಣ್ಯ ಪೂಜೆ ಜರುಗಿತು. ಮಹಾಪೂಜೆಯ ನಂತರ ತೀರ್ಥ ಪ್ರಸಾದ ವಿತರಣೆಯೊಂದಿಗೆ ಭಕ್ತರಿಗೆ ಅನ್ನ ಸಂತರ್ಪಣೆಯಾಯಿತು. ರಾತ್ರಿ ಅಗ್ನಿಪೂಜೆ, ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡವುಂ ನಡೆಯಿತು. ಭಾನುವಾರ ಬೆಳಿಗ್ಗೆ ಅಗ್ನಿ ಕೊಂಡ ಹಾಯುವ ವಿಧಿ ವಿಧಾನಗಳು ಜರುಗಿತು. ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿಯ ಅಧ್ಯಕ್ಷ ಈ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.











