ಮಡಿಕೇರಿ ಡಿ.30 NEWS DESK : ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಫೈನಲ್ ಪಂದ್ಯಕ್ಕೆ ಶುಭ ಕೋರುತ್ತಾ ಮಾತನಾಡಿದ ಶಾಸಕರು, ಕೊಡಗಿನ ಅದರಲ್ಲೂ ವಿಶೇಷವಾಗಿ ಕೊಡವ ಜನರ ಉಸಿರಾಗಿರುವ ಹಾಕಿ ಪಂದ್ಯಾವಳಿ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಖ್ಯಾತಿ ಪಡೆಯುತ್ತಿದ್ದು, ಇಂತಹ ಪಂದ್ಯಾವಳಿಗಳು ಯುವ ಪ್ರತಿಭೆಯನ್ನು ಲೋಕಕ್ಕೆ ಪರಿಚಯಿಸಲು ತುಂಬಾ ಸಹಕಾರಿಯಾಗುತ್ತದೆ. ಕೊಡವ ಹಾಕಿ ಅಕಾಡೆಮಿಯ ಈ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದ್ದು, ನಾಡಿನ ಯುವ ಪ್ರತಿಭೆಯನ್ನು ಲೋಕಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ತಂಡದವರಿಗೂ ಹಾಗೂ ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ ಎಲ್ಲಾ ಆಟಗಾರರಿಗೂ ಶುಭ ಕೋರುತ್ತಾ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಒಲಂಪಿಯನ್ ಚೆಪ್ಪುಡೀರ ಕಾರ್ಯಪ್ಪ ಅವರನ್ನು ಶಾಸಕರು ಸನ್ಮಾನಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡಾಂಡ ಬೋಪಣ್ಣ, ಎಸ್ ಎಲ್ ಎನ್ ಸಾತಪ್ಪನ್, ವಿಶ್ವನಾಥನ್, ಒಲಂಪಿಯನ್ ಚೆಪ್ಪುಡೀರ ಪೂಣಚ್ಚ, ರಮೇಶ್ ಮುದ್ದಯ್ಯ, ಸುರೇಶ್ ಅಪ್ಪಯ್ಯ, ಅರುಣ್ ಬೇಬ, ದೀಪಕ್ ಚೆಂಗಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.











