ಮಡಿಕೇರಿ ಡಿ.30 NEWS DESK : ಕನ್ನಡ ಸಾಹಿತ್ಯ ಪರಿಷತ್ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಕುವೆಂಪು ಅವರ ಜನ್ಮಸ್ಥಳ ಶಿವಮೊಗ್ಗದ ಕುಪ್ಪಳ್ಳಿಯ ಕವಿಮನೆ ಕವಿಶೈಲದಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರ ನೇತೃತ್ವದಲ್ಲಿ ಕಸಾಪದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾಹಿತ್ಯಾಭಿಮಾನಿಗಳು ಕವಿಶೈಲದಲ್ಲಿ ಕವಿ ಕುವೆಂಪು ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಕುವೆಂಪು ಅವರನ್ನು ಸ್ಮರಿಸುತ್ತಾ ಮಾತನಾಡಿದ ಈರಮಂಡ ಹರಿಣಿ ವಿಜಯ್ ಅವರು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿ ಮೊದಲ ಬಾರಿಗೆ ಕರುನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಸಾಹಿತ್ಯದಿಂದ ಕನ್ನಡಿಗರ ಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಜಾತಿಗೆ ನಿಲುಕದ ನಕ್ಷತ್ರ ವಿಶ್ವಮಾನವ ಕುವೆಂಪು ಎಂದು ವರ್ಣಿಸಿದರು. ದೇಶ, ಭಾಷೆ, ಮತ, ಜಾತಿ, ಜನಾಂಗ ವರ್ಣ ಇತ್ಯಾದಿ ಉಪಾಧಿಗಳಿಂದ ಪಾರಾಗಿ ವಿಶ್ವ ಮಾನವನನ್ನಾಗಿ ಪರಿವರ್ತಿಸುವ ಶಕ್ತಿ ವಿದ್ಯೆ, ಸಂಸ್ಕೃತಿ ಮತ್ತು ನಾಗರಿಕತೆಗಿದೆ. ವಿಶ್ವ ಮಾನವರಾಗುವುದು ಎಲ್ಲರ ಕರ್ತವ್ಯವಾಗಬೇಕು. ಲೋಕ ಉಳಿದು ಬಾಳಿ ಬದುಕಬೇಕಾದರೆ ಮುಂದಿನ ಪೀಳಿಗೆಯ ಮಕ್ಕಳೆಲ್ಲ ಅನಿಕೇತನರಾಗಬೇಕು. ಮತ್ತೊಮ್ಮೆ ಈ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕುವೆಂಪು ಅವರು ಹುಟ್ಟಿ ಬರುವಂತಾಗಬೇಕು ಎಂದು ಹರಿಣಿ ವಿಜಯ್ ತಿಳಿಸಿದರು. ವಿಶ್ವಮಾನವ ದಿನಾಚರಣೆಯನ್ನು ಕವಿಜನ್ಮ ಸ್ಥಳದಲ್ಲಿ ಆಚರಿಸಲು ಆಸಕ್ತಿ ತೋರಿ ಆಗಮಿಸಿದ ಮೂರ್ನಾಡು ಕಸಾಪದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಕವಿ ಶೈಲದ ಪ್ರಕೃತಿಯ ಮಡಿಲಲ್ಲಿ ಮೀನಾಕ್ಷಿ ಮರಗೋಡು, ಕೆ.ಜಿ.ರಮ್ಯ ಕವನ ವಾಚಿಸಿದರು, ಸುಗೀತಾ ಮರಗೋಡು, ಹಾಕತ್ತೂರು ಪ್ರೌಢಶಾಲೆಯ ಶಿಕ್ಷಕ ಮುನೀರ್, ಮೂರ್ನಾಡು ಪಿಎಂ ಶ್ರೀ ಶಾಲೆಯ ಶಿಕ್ಷಕ ರಾಜೇಶ್, ಮರಗೋಡು ಪ್ರೇಮ ಗಣೇಶ್, ತಾರಾದೇವಿ, ಸುಗೀತಾ, ಸುಶ್ಮಿತಾ ಹಾಗೂ ಮೀನಾಕ್ಷಿ ಹಾಡುಗಳನ್ನು ಹಾಡಿ ರಾಷ್ಟ್ರಕವಿ ಕುವೆಂಪು ಅವರಿಗೆ ನುಡಿ ನಮನ ಸಲ್ಲಿಸಿದರು. ಭಾಗವಹಿಸಿದ ಸರ್ವವರಿಗೂ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ವಿಶೇಷ ಆಹ್ವಾನಿತರಾಗಿ ಮಠದ ಮನೆ ಧನಂಜಯ, ಈರಮಂಡ ವಿಜಯ್, ಪದಾಧಿಕಾರಿಗಳಾದ ರೋಸ್ಲಿ, ಪುದಿಯೊಕ್ಕಡ ರಮ್ಯಾ, ಸದಸ್ಯರಾದ ಮಂಜು, ಭಾರತಿ ಬಿ.ಎಲ್, ಸುಮಯ್ಯ ಮುನೀರ್, ರೋಹಿಣಿ, ರಿತ್ವಿಕ ಪೊನ್ನಮ್ಮ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಅಪ್ಪಚಂಡ ಸುಚಿತ ಪ್ರಾರ್ಥಿಸಿ, ಕೋಶಾಧಿಕಾರಿ ಮಡೆಯಂಡ ಸೂರಜ್ ಸ್ವಾಗತಿಸಿದರು. ಕಸಾಪ ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಕೊಂಪುಳಿರ ಮಮತ ವಂದಿಸಿದರು. ಪ್ರಾರ್ಥನೆಯ ಬಳಿಕ ಸರ್ವರು ರೈತಗೀತೆ ಹಾಡಿದರು. ನಂತರ ಕಸಾಪ ತಂಡ ನೀನಾಸಂ, ಚರಕ, ಸಾರ ಸಂಸ್ಥೆ, ಬೇಲೂರು, ಹಳೇಬೀಡು, ಕೆಳದಿ ಇಕ್ಕೇರಿಗಳಿಗೆ ಭೇಟಿ ನೀಡಿತು. ಕಸಾಪ ಪದಾಧಿಕಾರಿಗಳು ಜೋಗ ಜಲಪಾತದಲ್ಲಿ “ಜೋಗದ ಸಿರಿ ಬೆಳಕಿನಲ್ಲಿ” ಹಾಡನ್ನು ಹಾಡಿ ಪ್ರವಾಸಿಗರ ಗಮನ ಸೆಳೆದರು.











