ಮಡಿಕೇರಿ ಡಿ.30 NEWS DESK : ನಾಪೋಕ್ಲು-ಭಾಗಮಂಡಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮುಂದಿನ 10 ದಿನಗಳೊಳಗೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಎಚ್ಚರಿಕೆ ನೀಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಎಸ್‍ಡಿಪಿಐ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಎಂ.ಎ.ಮುನೀರ್ ಅವರು ನಾಪೋಕ್ಲು- ಭಾಗಮಂಡಲ ರಸ್ತೆಯನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸಿದೆ, ಮಳೆಗಾಲ ಕಳೆದು ಬಿಸಿಲಿನ ವಾತಾವರಣವಿದ್ದರೂ ರಸ್ತೆಯ ಅಭಿವೃದ್ಧಿಗೆ ಮೀನಾ ಮೇಷ ಎಣಿಸಲಾಗುತ್ತಿದೆ. ಸಾರ್ವಜನಿಕ ಹಿತಾಸಕ್ತಿ ಎನ್ನುವುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಗ್ರಾಮದ ಮುಖ್ಯ ರಸ್ತೆಯನ್ನು ದುರಸ್ತಿ ಪಡಿಸಲು ಮನಸ್ಸು ಇಲ್ಲದ ಅಧಿಕಾರಿಗಳು, ಪ್ರಭಾವಿಗಳ ಮನೆ ಬಾಗಿಲಿಗೆ ರಸ್ತೆ ನಿರ್ಮಿಸಿಕೊಡುತ್ತಿದ್ದಾರೆ. ಗ್ರಾಮಸ್ಥರ ಹಿತ ಕಾಯುವ ಆಸಕ್ತಿಯನ್ನು ಅಧಿಕಾರಿಗಳು ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ. ತೀರಾ ಹದಗೆಟ್ಟಿರುವ ರಸ್ತೆಯಲ್ಲಿ ವಾಹನಗಳ ಸಂಚಾರ ಅಸಾಧ್ಯವಾಗಿದೆ, ಪಾದಾಚಾರಿಗಳು ನಡೆದಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಪೋಕ್ಲು- ಭಾಗಮಂಡಲ ರಸ್ತೆ ಅವ್ಯವಸ್ಥೆ ಕುರಿತು ಅನೇಕ ಬಾರಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರೂ ಟೆಂಡರ್ ಆಗಿದೆ, ಅನುದಾನದ ಕೊರತೆ ಇದೆ ಎನ್ನುವ ಉತ್ತರ ಬರುತ್ತಿದೆಯೇ ಹೊರತು ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ಕೂಡ ಆರಂಭಗೊಂಡಿಲ್ಲ. ಹದಗೆಟ್ಟ ರಸ್ತೆಯಿಂದ ಶಾಲಾ ಮಕ್ಕಳು, ಹಿರಿಯ ನಾಗರೀಕರು ಹಾಗೂ ಅನಾರೋಗ್ಯ ಪೀಡಿತರು ನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ಕನಿಷ್ಠ ಗುಂಡಿ ಮುಚ್ಚುವ ಭಾಗ್ಯ ಕೂಡ ಈ ರಸ್ತೆಗೆ ಕೂಡಿ ಬಂದಿಲ್ಲ ಎಂದು ಎಂ.ಎ.ಮುನೀರ್ ಅಸಮಾಧಾನ ವ್ಯಕ್ತಡಿಸಿದ್ದಾರೆ. ಮುಂದಿನ 10 ದಿನಗಳೊಳಗೆ ರಸ್ತೆ ದುರಸ್ತಿ ಕಾರ್ಯವನ್ನು ಆರಂಭಿಸದಿದ್ದಲ್ಲಿ ಗ್ರಾಮಸ್ಥರ ಬೆಂಬಲ ಪಡೆದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.











