ಮಡಿಕೇರಿ ಡಿ.30 NEWS DESK : ರಾಷ್ಟ್ರದ ಅಭಿವೃದ್ಧಿಗೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರವಾಗಿದ್ದು, ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಕರೆ ನೀಡಿದ್ದಾರೆ. ಕೊಡಗು ಜಿಲ್ಲೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪುರಸ್ಕøತವಾದ ಸೂಕ್ಷ್ಮ,, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್‍ಎಂಇ) ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ಸಂಬಂಧ ಜಿಲ್ಲಾ ಕೈಗಾರಿಕಾ ಅಭಿವೃದ್ಧಿಗೆ ಪಾಲುದಾರರಾದ ವಿವಿಧ ಇಲಾಖಾ ಅಧಿಕಾರಿಗಳಿಗೆ ಹಾಗೂ ಕೈಗಾರಿಕಾ ಸಂಘ-ಸಂಸ್ಥೆಗಳಿಗೆ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯುರೋಪ್‍ನ ಹಲವು ದೇಶಗಳು, ಚೀನಾ ಮತ್ತು ಜಪಾನ್ ರಾಷ್ಟ್ರಗಳು ಕೃಷಿ ಜೊತೆಗೆ ಸಣ್ಣ ಮತ್ತು ಬೃಹತ್ ಕೈಗಾರಿಕಾ ಯೋಜನೆಗಳಿಗೆ ಹೆಚ್ಚಿನ ಕೊಡುಗೆ ನೀಡಿವೆ ಎಂದರು. ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡಿದಾಗ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಕೃಷಿ ಜೊತೆಗೆ ಕೈಗಾರಿಕೆಗಳ ಅಭಿವೃದ್ಧಿ ಅತ್ಯಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.’ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಬೇಕು. ಇದರಿಂದ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗಕ್ಕೆ ಅವಕಾಶ ಕಲ್ಪಿಸಬಹುದಾಗಿದೆ ಎಂದು ಆರ್.ಐಶ್ವರ್ಯ ಅವರು ತಿಳಿಸಿದರು. ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಹನುಮಂತರಾಯ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ಹೆಚ್ಚಿನ ಹೊಡೆತ ಬಿದ್ದಿದ್ದು, ಇದನ್ನು ತಿಳಿದ ಸರ್ಕಾರವು ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವಲ್ಲಿ ನಿರ್ಧರಿಸಿದ್ದು, ಅದರಂತೆ ಸಾಲ ಸೌಲಭ್ಯ ಸೇರಿದಂತೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಿದೆ, ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಲವರ್ಧನೆ ಆದಲ್ಲಿ ಸ್ಥಳೀಯವಾಗಿ ಉದ್ಯೋಗ ದೊರೆಯಲಿದ್ದು, ಆರ್ಥಿಕವಾಗಿ ಮೇಲೆ ಬರಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿದು ಪರಿಸರಕ್ಕೆ ಹಾನಿಯಾಗದಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಅವರು ಮಾತನಾಡಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮೂಲಕ ಕೃಷಿ, ಕೈಗಾರಿಕೆ, ವಾಣಿಜ್ಯ, ವ್ಯಾಪಾರ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ಹೀಗೆ ಹಲವು ಕಾರ್ಯಕ್ರಮಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಪ್ರಗತಿಯತ್ತ ಹೆಜ್ಜೆ ಇಡಲಾಗಿದೆ ಎಂದು ಹೇಳಿದರು. ಪ್ರಸಕ್ತ ವರ್ಷ ಸುಮಾರು 1300 ಕೋಟಿಯಷ್ಟು ಕೃಷಿ, ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪ್ರೋತ್ಸಾಹಕ್ಕೆ ಮೀಸಲಿಡಲಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಿ ಸಹಕಾರ ನೀಡುತ್ತಾ ಬರಲಾಗಿದೆ ಎಂದು ಹೇಳಿದರು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಉದ್ಯಮ ಸ್ಥಾಪನೆಗೆ ಮುಂದಾಗಬೇಕು ಎಂದು ಗಂಗಾಧರ್ ನಾಯಕ್ ಅವರು ಹೇಳಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಬ್ಯಾಂಕ್‍ಗಳು ಸಕಾಲದಲ್ಲಿ ಕೃಷಿಕರಿಗೆ ಸಾಲ ಸೌಲಭ್ಯ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಬ್ಯಾಂಕ್‍ಗಳ ಮೂಲಕ ಸುಮಾರು 107 ಕ್ಕೂ ಹೆಚ್ಚು ಜನರಿಗೆ ಕೃಷಿಕರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಸಹಾಯಧನ ತಲುಪಿದೆ ಎಂದು ಹೇಳಿದರು. ನಬಾರ್ಡ್‍ನ ಉಪ ಮಹಾ ಪ್ರಬಂಧಕರಾದ ರಮೇಶ್ ಬಾಬು ಅವರು ಮಾತನಾಡಿ ರಾಷ್ಟ್ರದಲ್ಲಿ ಶೇ.30 ರಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಕಾಣಬಹುದಾಗಿದೆ. ಆದರೆ ಮುಂದುವರೆದ ರಾಷ್ಟ್ರಗಳಲ್ಲಿ ಶೇ60 ಕ್ಕಿಂತ ಹೆಚ್ಚು ಒತ್ತು ನೀಡಿರುವುದು ಕಾಣಬಹುದಾಗಿದೆ ಎಂದರು. ಮುಂದಿನ ಹತ್ತು ವರ್ಷದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರಕ್ಕೆ ಉತ್ತಮ ಅವಕಾಶವಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷರಾದ ನವೀನ್ ಅಂಬೆಕಲ್ಲು ಅವರು ಮಾತನಾಡಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಾಗಬೇಕು. ವರ್ತಕರು ಸೇರಿದಂತೆ ಪ್ರತಿಯೊಬ್ಬರಿಗೂ ಮಾಹಿತಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ಮಾಡಿದರು. ಸೂಕ್ಷ್ಮ , ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲಿ ವರ್ತಕರು ತೊಡಗಿಸಿಕೊಂಡಿದ್ದು, ಇಂತಹ ಸಣ್ಣ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹಿಸಿದ್ದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಚ್.ಕೆ.ರವಿ ಅವರು ಮಾತನಾಡಿ ಶೇ.5 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ 5 ಲಕ್ಷದಿಂದ 5 ಕೋಟಿ ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳಿಗೆ ಹಾಗೂ ಉತ್ಪಾದನೆಗೆ ಪೂರಕವಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗುವ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆ ಕಲ್ಪಿಸಲಾಗುತ್ತದೆ ಎಂದರು. ಆಹಾರ ಸಂಸ್ಕರಣೆ, ಎಂಜಿನಿಯರಿಂಗ್, ಜವಳಿ ಮತ್ತು ಸಿದ್ಧ ಉಡುಪು, ಅಟೋ ಮೊಬೈಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು, ಮುದ್ರಣ ಚಟುವಟಿಕೆ, ಟೆಲಿ ಕಮ್ಯುನಿಕೇಷನ್ ಮತ್ತು ಮಾಹಿತಿ ತಂತ್ರಜ್ಞಾನ, ಕಾಗದ ಉತ್ಪನ್ನಗಳು ಮತ್ತಿತರಕ್ಕೆ ಶೇ.6 ರಷ್ಟು ಬಡ್ಡಿ ದರದಲ್ಲಿ ಸಹಾಯಧನ ದೊರೆಯಲಿದೆ ಎಂದು ಹೇಳಿದರು. ಮಹಿಳಾ ಉದ್ಯಮಿಗಳಿಂದ ಹೊಸದಾಗಿ ಸ್ಥಾಪಿಸಲ್ಪಡುವ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ಸೇವಾ ಚಟುವಟಿಕೆಗಳಾದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಆಸ್ಪತ್ರೆ, ನರ್ಸಿಂಗ್ ಹೋಂ, ಕಣ್ಣಿನ ಆಸ್ಪತ್ರೆ, ವೈದ್ಯಕೀಯ ಚಿಕಿತ್ಸಾಲಯಗಳು, ಜಿಮ್, ಮಾಹಿತಿ ತಂತ್ರಜ್ಞಾನ ಸೇವಾ ಕೇಂದ್ರಗಳಿಗೆ ಬಡ್ಡಿ ಸಹಾಯಧನ ಯೋಜನೆ ಕಲ್ಪಿಸಲಾಗುತ್ತಿದೆ ಎಂದು ರವಿ ಅವರು ವಿವರಿಸಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಿ.ದೇವೇಂದ್ರನ್ ಅವರು ಮಾತನಾಡಿದರು. ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಿ.ಎನ್.ರಘು, ನಂದ ಕಿಶೋರ್, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು, ಇಲಾಖೆಯ ಅಧಿಕಾರಿಗಳು ಇತರರು ಇದ್ದರು.











