ಮಡಿಕೇರಿ ಡಿ.30 NEWS DESK : ಹೊಸ ವರ್ಷಾಚರಣೆ ಹೆಸರಲ್ಲಿ ಕಾನೂನು ಉಲ್ಲಂಘನೆ, ಅಕ್ರಮ ಚಟುವಟಿಕೆ ಕಂಡು ಬಂದಲ್ಲಿ ಶಿಸ್ತು ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟ ಸಂದೇಶ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್.ಪಿ.ರಾಮರಾಜನ್ ಹೋಂ ಸ್ಟೇ, ರೆಸಾರ್ಟ್‍ಗಳಲ್ಲಿ ಸಂಭ್ರಮಾಚರಣೆ ಮಾಡಲು ಯಾವುದೇ ಅಡ್ಡಿ ಇಲ್ಲ. 10 ಗಂಟೆಯ ಬಳಿಕ ನಿಗಧಿತ ಮಿತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಬೇಕು. ತೆರೆದ ಪ್ರದೇಶಗಳಲ್ಲಿ ಸಂಭ್ರಮಾಚರಣೆ ಮಾಡಲು ಅನುಮತಿ ಕಡ್ಡಾಯವಾಗಿರುತ್ತದೆ. ಹೋಂಸ್ಟೇಗಳಲ್ಲಿ ಮಾದಕ ವಸ್ತುಗಳ ಬಳಕೆ, ಸೇವನೆ ಕಂಡು ಬಂದಲ್ಲಿ ಅದರ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ಹೋಂಸ್ಟೇ ಕಟ್ಟಡವನ್ನು ಬಾಡಿಗೆ ನೀಡಲಾಗಿದೆ ಎಂಬ ನೆಪಗಳಿಗೆ ಅವಕಾಶ ಇಲ್ಲ. ಈ ಕುರಿತು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಭೆ ನಡೆಸಿ ಹೋಂಸ್ಟೇ ಮಾಲೀಕರು, ಹೋಂ ಸ್ಟೇ ನಡೆಸುವವರಿಗೂ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. :: ಪಾರ್ಟಿಗಳ ಮೇಲೆ ನಿಘಾ :: ಹೋಂ ಸ್ಟೇ, ರೆಸಾರ್ಟ್‍ಗಳಲ್ಲಿ ಆಯೋಜಿಸಲಾಗುವ ಪಾರ್ಟಿಗಳ ಮೇಲೂ ನಿಘಾ ಇಡಲಾಗುತ್ತದೆ. ಅಕ್ರಮ ಚಟುವಟಿಕೆ, ಮಾದಕ ವಸ್ತು ಸೇವೆನೆ ಮಾರಾಟ, ಬಳಕೆ ಕುರಿತು ಮಾಹಿತಿ ದೊರೆತರೆ ಅಂತಹ ಕಡೆಗಳಿಗೆ ತೆರಳಿ ಸ್ಥಳ ಪರಿಶೀಲನೆ ಮಾಡಲಾಗುತ್ತದೆ. ಕಾನೂನು ಬಾಹಿರ ಕೃತ್ಯ ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಮುಂದೆ ಅಲ್ಲಿ ಯಾವುದೇ ಉದ್ದಿಮೆಗೆ ಪೊಲೀಸ್ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ದೊರೆಯುವುದಿಲ್ಲ ಎಂದು ವಿವರಿಸಿದರು. ಪ್ರವಾಸಿಗರು ಹೆಚ್ಚು ಸೇರುವ ಕಡೆಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗುತ್ತದೆ ಎಂದು ವಿವರಿಸಿದರು. :: ರೇವ್ ಪಾರ್ಟಿ-ಪ್ರಕರಣ ದಾಖಲು :: ಕುಶಾಲನಗರದ ತಂಡ ಒಂದು ಸೋಮವಾರಪೇಟೆ ಭಾಗದಲ್ಲಿ ಹೊಸ ವರ್ಷಾಚರಣೆ ಹೆಸರಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲು ಸಿದ್ದತೆ ನಡೆಸಿತ್ತು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭ ಸಿಂಥೆಟಿಕ್ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈಗಾಗಲೇ ಜಿಲ್ಲೆಯ ವಿವಿಧೆಡೆ ಶಂಕಿತ 50 ಮಂದಿಯನ್ನು ವಶಕ್ಕೆ ಪಡೆದು ಡ್ರಗ್ ಸೇವನೆ ಕುರಿತು ಪರಿಶೀಲನೆ ನಡೆಸಲಾಗಿದೆ. ಮಾದಕ ವಸ್ತು ಸೇವನೆ, ಮಾರಾಟ, ಬಳಕೆ ಕುರಿತು ಹದ್ದಿನ ಕಣ್ಣಿಡಲಾಗಿದೆ. ಹೋಂಸ್ಟೇಗಳಲ್ಲಿ ಮದ್ಯ ಸರಬರಾಜು ಮಾಡಲು ಅಬಕಾರಿ ಇಲಾಖೆಯಿಂದ ಅಗತ್ಯ ಅನುಮತಿ ಪಡೆದಿರಬೇಕು. ಪೊಲೀಸ್ ಪರಿಶೀಲನೆ ವೇಳೆ ಕಾನೂನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕಾನೂನು ಕ್ರಮ ಶತ ಸಿದ್ದ ಎಂದು ಹೇಳಿದರು. ಹೊಸ ವರ್ಷಾಚರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ 112 ತುರ್ತು ಸಂಖ್ಯೆಗೆ ಕರೆ ಮಾಡುವಂತೆ ಎಸ್.ಪಿ. ರಾಮರಾಜನ್ ಹೇಳಿದರು. ಈ ಸಂದರ್ಭ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು ಹಾಜರಿದ್ದರು.











