ಮಡಿಕೇರಿ ಡಿ.30 NEWS DESK : ಇತ್ತೀಚಿನ ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಿಗೆ ಕೊಡಗಿನ ಕ್ರೀಡಾ ಪ್ರತಿಭೆಗಳು ಆಯ್ಕೆಯಾಗದೆ ಇರುವುದು ಕಂಡು ಬಂದಿದೆ. ಈ ಕುರಿತು ಸಾಮೂಹಿಕ ಚಿಂತನೆ ನಡೆಸಿ ಕ್ರೀಡಾಪಟುಗಳ ಬೆಳವಣಿಗೆಗೆ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ತಿಳಿಸಿದ್ದಾರೆ. ಕೊಡವ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ಯ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಾಕಿ ಕೊಡವ ಸಂಸ್ಕøತಿಯ ಒಂದು ಭಾಗವಾಗಿದೆ, ಕೊಡವರು ಸಣ್ಣ ಸಂಖ್ಯೆಯಲ್ಲಿದ್ದರೂ ದೊಡ್ಡ ಸಂಖ್ಯೆಯ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಇಂದು ರಾಜ್ಯ ಮಟ್ಟದ ತಂಡಕ್ಕೂ ಕ್ರೀಡಾ ಪ್ರತಿಭೆಗಳು ಆಯ್ಕೆಯಾಗದೆ ಇರುವುದು ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ, ಗ್ರಾಮ ಗ್ರಾಮಗಳಲ್ಲಿ ಕ್ರೀಡಾಕೂಟಗಳು ನಡೆಯುತ್ತಿವೆ. ಕೊಡಗು ಇಂದು ಹಾಕಿ ಕ್ರೀಡೆಗೆ ಮಾತ್ರ ಸೀಮಿತವಾಗದೆ ಎಲ್ಲಾ ಕ್ರೀಡೆಗಳಲ್ಲೂ ಗುರುತಿಸಿಕೊಂಡಿದೆ ಮತ್ತು ಕ್ರೀಡಾ ಪ್ರತಿಭೆಗಳು ತೊಡಗಿಸಿಕೊಳ್ಳುತ್ತಿದ್ದಾರೆ. ಕ್ರೀಡೆಗಳ ಬೆಳವಣಿಗೆಗಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಪ್ರಸ್ತುತ ವಿ.ಬಾಡಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ, ಇಲ್ಲಿ ಶೂಟಿಂಗ್ ರೇಂಜ್ ನ್ನು ಕೂಡ ಅಳವಡಿಸಲಾಗುತ್ತಿದೆ. ಕೊಡಗಿನ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾ ತಂಡಗಳಿಗೆ ಕ್ರೀಡಾಪಟುಗಳು ಆಯ್ಕೆಯಾಗುತ್ತಿಲ್ಲ. ಈ ಬಗ್ಗೆ ಎಲ್ಲಾ ಹಾಕಿ ಸಂಸ್ಥೆಗಳು ಸಾಮೂಹಿಕ ಚಿಂತನೆ ನಡೆಸುವ ಮೂಲಕ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಮಾತನಾಡಿ ಒಲಂಪಿಯನ್ ಗಳಿರುವ ಹಾಕಿ ಸಂಸ್ಥೆಯ ಎರಡು ಗ್ರೂಪ್ ಗಳನ್ನು ಒಂದು ಮಾಡುವ ಅಗತ್ಯವಿದೆ, ಭಿನ್ನಾಭಿಪ್ರಾಯವಿಲ್ಲದೆ ಸದಸ್ಯತ್ವ ಸಿಗಬೇಕು. ಒಂದು ಮಾಡುವ ಕೆಲಸ ಕೊಡಗಿನಿಂದಲೇ ಆರಂಭಗೊಳ್ಳಲಿ, ಶಾಸಕರು ಸಹಕರಿಸಲಿ. ಹಿರಿಯ ಆಟಗಾರರೊಂದಿಗೆ ಈ ಕುರಿತು ಈಗಾಗಲೇ ಚರ್ಚಿಸಿದ್ದೇನೆ ಎಂದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷನಾಗಿ 13 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ, ಇಷ್ಟು ಜಿಲ್ಲೆಗಳಲ್ಲಿ ಕ್ರೀಡಾ ಸಂಕೀರ್ಣವಿಲ್ಲದ ಏಕೈಕ ಜಿಲ್ಲೆ ಎಂದರೆ ಅದು ಕೊಡಗು ಎಂದು ಬೇಸರ ವ್ಯಕ್ತಪಡಿಸಿದರು. ಇದೀಗ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ವಿ.ಬಾಡಗದಲ್ಲಿ 11 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, 30 ಕೋಟಿ ರೂ. ಮಂಜೂರಾಗಿದೆ. ಶಾಸಕ ಡಾ.ಮಂತರ್ ಗೌಡ ಅವರ ಪ್ರಯತ್ನದಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟರ್ಫ್ ಅಳವಡಿಕೆಗೆ 8 ಕೋಟಿ ರೂ. ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಮಾತನಾಡಿ ಪಾಂಡಂಡ ಕುಟ್ಟಪ್ಪ ಅವರು ಆರಂಭಿಸಿದ ಕೊಡವ ಕೌಟುಂಬಿಕ ಹಾಕಿ ಉತ್ಸವ ಇಂದು ಕೊಡವ ಜನಾಂಗ ಒಗ್ಗೂಡಲು ಸಹಕಾರಿಯಾಗಿದೆ ಎಂದರು. ಸಣ್ಣ ಜಿಲ್ಲೆಯಾದರೂ ದೇಶದ ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಕೀರ್ತಿ ಕೊಡಗಿಗೆ ಸಲ್ಲುತ್ತದೆ. ಮುಂದಿನ ಪೀಳಿಗೆ ಉತ್ತಮ ರೀತಿಯಲ್ಲಿ ಕ್ರೀಡಾ ತರಬೇತಿಯನ್ನು ಪಡೆದು ಜಿಲ್ಲೆಗೆ ಮತ್ತು ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಹೊರ ಹೊಮ್ಮಲಿ ಎಂದು ಕರೆ ನೀಡಿದರು. ಎ.ಎಸ್.ಪೊನ್ನಣ್ಣ ಅವರು ಶಾಸಕರಾಗಿ ಜಮ್ಮಾ ಸಮಸ್ಯೆಗೆ ಪರಿಹಾರ ಸೂಚಿಸಿದ್ದು, ಅವರು ಅಭಿನಂದನಾರ್ಹರು. ಪಕ್ಷ ಯಾವುದೇ ಇರಲಿ ಕೊಡಗಿನ ಅಭಿವೃದ್ಧಿ ಮುಖ್ಯ ಎಂದು ಸುಜಾ ಕುಶಾಲಪ್ಪ ಹೇಳಿದರು. ಎಸ್‍ಎಲ್‍ಎನ್ ಗ್ರೂಪ್ ನ ವ್ಯವಹಾರಿಕ ಮುಖ್ಯಸ್ಥ ವೆಂಕಟಾಚಲಂ ಸಾತಪ್ಪನ್ ಅವರು ಮಾತನಾಡಿ ಪುಟ್ಟ ಜಿಲ್ಲೆ ಕೊಡಗು ಸೇನೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಕೊಂಡಾಡಿದರು. ಜಿಲ್ಲೆಯ ಜನರ ದೇಶಪ್ರೇಮ ಹಾಗೂ ಕ್ರೀಡಾಸ್ಫೂರ್ತಿ ಇತರರಿಗೆ ಮಾದರಿಯಾಗಿದೆ. ಕೊಡವ ಹಾಕಿ ಹಬ್ಬ ಅದ್ಭುತವಾದ ಪರಿಕಲ್ಪನೆಯಾಗಿದ್ದು, ಮುಂದಿನ ದಿನಗಳಲ್ಲೂ ಕ್ರೀಡಾಕೂಟಗಳಿಗೆ ಮತ್ತು ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಎಸ್‍ಎಲ್‍ಎನ್ ಗ್ರೂಪ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಕೊಡವ ಹಾಕಿ ಅಕಾಡೆಮಿ ವತಿಯಿಂದ ನಡೆದ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ ಯಶಸ್ವಿಯಾಗಿದೆ. ಹಾಕಿಯ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಅಕಾಡೆಮಿ ಮುಂದೆ ರೂಪಿಸಲಿದೆ ಎಂದರು. ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪಂಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ವಿ.ಆರ್.ರಘುನಾಥ್, ಹಾಕಿ ಕೂರ್ಗ್ ಕಾರ್ಯದರ್ಶಿ ಅಮ್ಮಂಡಿರ ಚೇತನ್ ಕಾವೇರಿಯಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋಟ್ರ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.












