ಮಡಿಕೇರಿ NEWS DESK ಡಿ.30 : ಕೊಡವ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ನಡೆದ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ಯ ಅಂತಿಮ ಪಂದ್ಯದಲ್ಲಿ ಚೆಪ್ಪುಡಿರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಟ್ರೋಫಿಯನ್ನು ಗೆದ್ದು ಬೀಗಿದೆ, ಕುಲ್ಲೇಟಿರ ತಂಡ ಸೋಲೊಪ್ಪಿಕೊಂಡಿದೆ. ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಚೆಪ್ಪುಡಿರ ಮತ್ತು ಕುಲ್ಲೇಟಿರ ನಡುವೆ ನಡೆದ ಅಂತಿಮ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ಸಾಧಿಸಿತು. ಚೆಪ್ಪುಡಿರ ಸೋಮಣ್ಣ ಒಂದು ಗೋಲು ದಾಖಲಿಸಿದರು. ವಿಜೇತ ಚೆಪ್ಪುಡಿರ ತಂಡಕ್ಕೆ 2 ಲಕ್ಷ ರೂ., ದ್ವಿತೀಯ ಸ್ಥಾನ ಪಡೆದ ಕುಲ್ಲೇಟಿರ ತಂಡಕ್ಕೆ 1 ಲಕ್ಷ ರೂ., ಸೆಮಿಫೈನಲ್‌ಗೆ ಅರ್ಹತೆ ಪಡೆದ ಮಂಡೇಪಂಡ ಮತ್ತು ಕುಪ್ಪಂಡ ತಂಡಕ್ಕೆ ತಲಾ 50 ಸಾವಿರ ರೂ. ಹಾಗೂ ಉಳಿದ 8 ತಂಡಗಳಿಗೆ ತಲಾ 25 ಸಾವಿರ ರೂ. ಬಹುಮಾನ ಮತ್ತು ಸ್ಮರಣಿಕೆಯನ್ನು ನೀಡಲಾಯಿತು. ಬೆಸ್ಟ್ ಗೋಲ್ ಕೀಪರ್ ಕುಲ್ಲೇಟಿರ ವಚನ್ ಕಾಳಪ್ಪ, ಬೆಸ್ಟ್ ಫಾರ್ವರ್ಡ್ ಚೆಪ್ಪುಡಿರ ಚೇತನ್ ಚಿಣ್ಣಪ್ಪ, ಬೆಸ್ಟ್ ಡಿಫೆಂಡರ್ ಮಂಡೇಪಂಡ ಭುವನ್ ನಾಣಯ್ಯ, ಬೆಸ್ಟ್ ಮಿಡ್ ಫೀಲ್ಡರ್ ಕುಪ್ಪಂಡ ಸೋಮಯ್ಯ, ಬೆಸ್ಟ್ ಅಪ್ ಕಮಿಂಗ್ ಪ್ಲೇಯರ್ ಚೆಪ್ಪುಡಿರ ಲೆನನ್ ಮಾದಪ್ಪ ಹಾಗೂ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಚೆಪ್ಪುಡಿರ ಮಂದಣ್ಣ ಪ್ರಶಸ್ತಿ ಪಡೆದರು. ಐದು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ಕೌಟುಂಬಿಕ ಕೊಡವ ಹಾಕಿ ಹಬ್ಬದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು.










