ಮಡಿಕೇರಿ NEWS DESK ಡಿ.30 : ದೇಶದ ವಿವಿಧ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯಗಳು, ಕ್ರಿಸ್ಮಸ್ ಆಚರಣೆಗಳು ಮತ್ತು ಕೆರೋಲ್ ಗುಂಪುಗಳ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸುವುದಾಗಿ ದಕ್ಷಿಣ ಕೊಡಗು ಕ್ರಿಶ್ಚಿಯನ್ ಸಂಘದ ಅಧ್ಯಕ್ಷ ಎ.ಜೆ.ಬಾಬು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಾಂತಿಯುತವಾಗಿ ನಮ್ಮ ನಂಬಿಕೆಯನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಸಾರ ಮಾಡುವ ಹಕ್ಕು ಸಂವಿಧಾನದಲ್ಲಿ ನಿಗಧಿ ಪಡಿಸಲಾದ ಮೂಲಭೂತ ಸ್ವಾತಂತ್ರ್ಯವಾಗಿದೆ. ಆದರೆ ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯಗಳ ಮೇಲೆ ನಡೆದಿರುವ ದಾಳಿ ಕಳವಳಕಾರಿ ಬೆಳವಣಿಗೆ ಮತ್ತು ಕಾನೂನು ವಿರೋಧಿ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದ ನಡುವೆ ಒಂದು ಸಮುದಾಯವನ್ನು ಗುರಿಯಾಗಿಸುವ ಈ ರೀತಿಯ ಘಟನೆಗಳು ಭಾರತದ ಪ್ರೀತಿಪಾತ್ರ ಬಹುಸಂಸ್ಕೃತಿಯ ಸಾಮಾಜಿಕ ಸಾಮರಸ್ಯಕ್ಕೆ ದಕ್ಕೆಯನ್ನುಂಟು ಮಾಡುತ್ತದೆ. ಆದ್ದರಿಂದ ಸಂಬಂಧಿಸಿದ ರಾಜ್ಯಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬ ನಾಗರಿಕ ಭಯವಿಲ್ಲದೆ ದೇಶದ ಸಂವಿಧಾನ ನೀಡಿರುವ ಹಕ್ಕುಗಳನ್ನು ಚಲಾಯಿಸಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಎ.ಜೆ.ಬಾಬು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಆಡಳಿತದ ಅಡಿಯಲ್ಲಿ ಎಲ್ಲಾ ಹಬ್ಬಗಳು ಹಾಗೂ ಧಾರ್ಮಿಕ ಆಚರಣೆಗಳಿಗೆ ಸಾಮರಸ್ಯದ ಭಾವನೆ ಮತ್ತು ಕಟ್ಟುನಿಟ್ಟಾದ ಕಾನೂನು ಶಾಂತಿಯುತ ವಾತಾವರಣವನ್ನು ಖಾತ್ರಿಗೊಳಿಸಿದೆ. ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧವಾದ ರಾಜಕೀಯ ಇಚ್ಛಾಶಕ್ತಿಯ ಪ್ರದರ್ಶನ ಮತ್ತು ಆಡಳಿತದೊಂದಿಗೆ ಶಾಂತಿ ಹಾಗೂ ಭ್ರಾತೃತ್ವವನ್ನು ಕಾಪಾಡಿಕೊಳ್ಳಬಹುದು ಎಂಬುವುದಕ್ಕೆ ಇದು ಒಂದು ಉತ್ತಮ ನಿದರ್ಶನವಾಗಿದೆ. ಇದಕ್ಕಾಗಿ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮೊದಲಿಗೆ ಭಾರತೀಯರಾಗಿ, ರಾಷ್ಟ್ರದ ಧರ್ಮನಿರಪೇಕ್ಷ ರಚನೆಯಲ್ಲಿ ನಮ್ಮ ನಂಬಿಕೆಯನ್ನು ನಾವು ಮತ್ತೊಮ್ಮೆ ದೃಢಪಡಿಸುತ್ತೇವೆ. ಸಹನೆ ಮತ್ತು ಪರಸ್ಪರ ಗೌರವದ ನಮ್ಮ ಹಂಚಿಕೆಯ ಮೌಲ್ಯಗಳನ್ನು ಎಲ್ಲಾ ವರ್ಗದ ಜನತೆ ಹಾಗೂ ರಾಜಕೀಯ ನಾಯಕತ್ವವು ಕಾಪಾಡಿಕೊಳ್ಳಬೇಕು ಎಂದು ಕೋರುತ್ತೇವೆ. ದಾಳಿಯಿಂದ ನೊಂದವರ ಪರ ನಾವು ನಿಲ್ಲುತ್ತೇವೆ ಎಂದು ಎ.ಜೆ.ಬಾಬು ಹೇಳಿದ್ದಾರೆ.










