ಮಡಿಕೇರಿ NEWS DESK ಡಿ.30 : ಯುನೈಟೆಡ್ ಪ್ಲಾಂಟೇಷನ್ ವರ್ಕ ರ‍್ಸ್ ಯೂನಿಯನ್ (ಎಐಟಿಯುಸಿ) ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಣಶೇಖರ್ ಅವರ ಸ್ಮರಣಾರ್ಥ ಕಾರ್ಮಿಕ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಸಕಲೇಶಪುರದಲ್ಲಿ ನಡೆಯಿತು. ಪ್ರತಿಭಾ ಪುರಸ್ಕಾರ ಪಡೆದ ಬಿಳಿಗೇರಿ ಗ್ರಾಮದ ಪಿಯುಸಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಯುನೈಟೆಡ್ ಪ್ಲಾಂಟೇಷನ್ ವರ್ಕ ರ‍್ಸ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಸನ್ಮಾನಿಸಿ ಪ್ರೋತ್ಸಾಹಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಅವರು ಕಾರ್ಮಿಕರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎನ್ನುವ ಕಾರಣಕ್ಕಾಗಿ ಪ್ರತಿವರ್ಷ ಗುಣಶೇಖರ್ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು. ಪ್ರಸ್ತುತ ವರ್ಷ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾರ್ಮಿಕ ಕುಟುಂಬದ ವಿದ್ಯಾರ್ಥಿಗಳನ್ನು ಸಕಲೇಶಪುರದಲ್ಲಿ ಪುರಸ್ಕರಿಸಲಾಗಿದೆ. ಬಿಳಿಗೇರಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು ಎಂದು ತಿಳಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಎಐಟಿಯುಸಿ ಸಂಘಟನೆಯ ಪ್ರಮುಖರಾದ ಬಿಳಿಗೇರಿ ಲೋಕೇಶ್, ಗೋಪಾಲ, ಸಂಜೀವ, ರಾಘವೇಂದ್ರ, ಗಣೇಶ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.










