ಮಡಿಕೇರಿ ಡಿ.31 NEWS DESK : ನಗರದ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಜ.8 ರಂದು ಮಡಿಕೇರಿಯಲ್ಲಿ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳ ದೈವಜ್ಞ ದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ದೈವಜ್ಞ ಬ್ರಾಹ್ಮಣ ಕಟ್ಟಡ ಸಮಿತಿ ಅಧ್ಯಕ್ಷ ಬಿ.ಹೆಚ್.ಉಲ್ಲಾಸ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಫಲಾನ್ಯಾನ, ಗುರುಗಣಪತಿ ಪೂಜೆ, ಸ್ವಸ್ತಿ ಪೂಣ್ಯಾವಾಚನ, ಸತ್ಯನಾರಾಯಣ ವೃತ ಕಥಾ ಪ್ರಾರಂಭ ನಡೆಯಲಿದೆ ಎಂದು ತಿಳಿಸಿದರು. ಮಧ್ಯಾಹ್ನ ಅನ್ನದಾನ ನಡೆಯಲಿದ್ದು, ಸಂಜೆ 4.30 ಗಂಟೆಗೆ ಶ್ರೀಗಳ ಪುರಪ್ರವೇಶವಾಗಲಿದೆ. ನಂತರ ಪೂರ್ಣ ಕುಂಭ ಮೆರವಣಿಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಚೌಡೇಶ್ವರಿ ದೇವಾಲಯದವರೆಗೆ ನಡೆಯಲಿದೆ. ಬಳಿಕ ಸಮಾಜದ ವತಿಯಿಂದ ಶ್ರೀಗಳಿಗೆ ಪಾದುಕಾ ಪೂಜೆ, ಶ್ರೀಗಳಿಂದ ಆಶೀರ್ವಚನ, ಫುಲಪುಷ್ಪ ಸಮರ್ಪಣೆ, ಫಲ ಮಂತ್ರಾಕ್ಷತೆ ನೆರವೇರಲಿದೆ. ಕಾರ್ಯಕ್ರಮಕ್ಕೆ ಸಮಾಜದ ಪುರುಷರು ಬಿಳಿ ಅಂಗಿ, ಪಂಚೆ ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿ.ಹೆಚ್.ಉಲ್ಲಾಸ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ವಿ.ರೋಷನ್, ಗೌರವಾಧ್ಯಕ್ಷ ಕೆ.ಮಧುಕರ್, ಕಾರ್ಯದರ್ಶಿ ರಜತ್ ಶೇಟ್, ಖಜಾಂಚಿ ಎಸ್.ಎ.ವಿನಾಯಕ, ಯುವಕ ಸಂಘದ ಮಾಜಿ ಅಧ್ಯಕ್ಷ ಎಂ.ಬಿ.ಉಮೇಶ್ ಉಪಸ್ಥಿತರಿದ್ದರು.











